ಕಲಬುರಗಿ: ಕಲಬುರಗಿ - ಯಾದಗಿರಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಣಿಸಿ ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ
ಕಲಬುರಗಿ - ಯಾದಗಿರಿ ಡಿಸಿಸಿ ಬ್ಯಾಂಕ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಪುನಃ ಅಧಿಕಾರಕ್ಕೆ ಬಂದಿದೆ.
13 ಸ್ಥಾನಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ಕೇವಲ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸೋಲುಂಡಿದೆ. 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅವರಲ್ಲಿ 5 ಜನ ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿಯವರಾಗಿದ್ದಾರೆ. ಎಲೆಕ್ಷನ್ ನಡೆದ 6 ಸ್ಥಾನಗಳಲ್ಲಿ 4 ಕಾಂಗ್ರೆಸ್ ಗೆದ್ದು ಬೀಗಿದ್ರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 13 ಸ್ಥಾನಗಳು ಹಾಗೂ ಇಬ್ಬರು ಸಹಕಾರಿ ಅಧಿಕಾರಿಗಳ ಜೊತೆಗೆ ಓರ್ವ ನಾಮ ನಿರ್ದೇಶಿತ ಸದಸ್ಯ ಸೇರಿ ಒಟ್ಟು16 ಸ್ಥಾನಗಳಾಗಲಿದ್ದು, ಬಹುಮತಕ್ಕೆ 9 ಸದಸ್ಯರು ಬೇಕು. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಚುನಾವಣೆ ನಡೆದ ಆರು ಸ್ಥಾನಗಳಲ್ಲಿ ನಾಲ್ಕು ಅಭ್ಯರ್ಥಿಗಳು ಕೇವಲ ಒಂದು ಮತದಿಂದ ವಿಜಯ ಮಾಲೆ ತೊಟ್ಟಿದ್ದಾರೆ.
ಜೇವರ್ಗಿ ತಾಲೂಕಿನಿಂದ ನಿಂಗಪ್ಪ ಮಾಳಪ್ಪ ದೊಡ್ಮನಿ, ಚಿಂಚೋಳಿ ತಾಲೂಕಿನಿಂದ ಗೌತಮ ವೈಜನಾಥ ಪಾಟೀಲ್, ಪಟ್ಟಣ ಸಹಕಾರಿ ಕ್ಷೇತ್ರದಿಂದ ಸೋಮಶೇಖರ, ಗೋನಾಯಕ ಹಾಗೂ ಟಿಎಪಿಸಿಎಂ ಕ್ಷೇತ್ರದಿಂದ ಶಿವಾನಂದ ಮಾನಕರ ಒಂದು ಮತದಿಂದ ಚುನಾಯಿತರಾಗಿದ್ದಾರೆ. ಇನ್ನು ಚಿತ್ತಾಪುರ ಕ್ಷೇತ್ರದಿಂದ ಬಸವರಾಜ ಅಣ್ಣಾರಾವ ಪಾಟೀಲ್ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ್ರೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಿಂದ ಗುರುನಾಥ ಪರ್ವತ ರೆಡ್ಡಿ 13 ಮತಗಳ ಅಂತರದಿಂದ ಜಯ ಶಾಲಿಯಾಗಿದ್ದಾರೆ.