ಗದಗ:ಜಿಲ್ಲೆಯಲ್ಲಿ ಚುನಾವಣೆಯ ಕಾವು ಜೋರಾಗಿದೆ. ಸಿನಿಮಾ ಕಲಾವಿದರು, ರಾಜಕೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬುಧವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಹಿಂದು ವಿರೋಧಿ ಮಾನಸಿಕತೆ ಹೊಂದಿದೆ. ಬಜರಂಗದಳ ನಿಷೇಧ ಮಾಡುವುದು ಕನಸಿನ ಮಾತು. ಮಾಡಿದರೂ ಅದಕ್ಕೆ ಹಿಂದು ಸಂಘಟನೆಗಳು ಉತ್ತರ ಕೊಡಲಿದ್ದಾರೆ" ಎಂದರು.
ಗದಗದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಗುಡುಗಿದ ಜೋಶಿ, "ನಮ್ಮ ಹೋರಾಟ ಹಿಂದು ವಿರೋಧಿ ಮಾನಸಿಕತೆ ಬಗ್ಗೆ. ಕಾಶ್ಮೀರದ ಕಲಂ 370 ತೆಗೆದಾಗ, ಸರ್ಜಿಕಲ್ ಸ್ಟ್ರೈಕ್ ಆದಾಗ ಕಾಂಗ್ರೆಸ್ ಮತ್ತು ಪಾಕಿಸ್ತಾನ ಭಾಷೆ ಒಂದೇ ಆಗಿತ್ತು. ಬಾಟ್ಲಾ ಹೌಸ್ ಪ್ರಕರಣ ನಡೆದಾಗಲೂ ಸಹ ಟೆರರಿಸ್ಟ್ ಹತ್ಯೆ ಮಾಡಲಾಗಿತ್ತು. ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾತ್ರಿಪೂರ್ತಿ ಮಲಗಿರಲಿಲ್ಲ. ಮೋಹನ್ ಚಂದ್ರ ಅನ್ನೋ ಪೊಲೀಸ್ ಅಧಿಕಾರಿ ಮೃತಪಟ್ಟಾಗ ಅವರು ಒಂದು ತೊಟ್ಟೂ ಕಣ್ಣೀರು ಹಾಕಲಿಲ್ಲ. ಕಾಂಗ್ರೆಸ್-ಪಾಕಿಸ್ತಾನದ ನಡುವೆ ಹೊಂದಾಣಿಕೆ ಇದೆ ಎಂದು ತಿಳಿಯುತ್ತಿದೆ. ಹಾಗಾಗಿ ಬಜರಂಗದಳ ಮತ್ತು ಪಿಎಫ್ಐಯನ್ನು ಒಂದೇ ರೀತಿ ನೋಡ್ತಿದಾರೆ. ಇದು ದೇಶದ ಹಿಂದೂಗಳಿಗೆ ಮಾಡಿದ ಘನ ಘೋರ ಅಪಮಾನ" ಎಂದು ವಾಗ್ದಾಳಿ ನಡೆಸಿದರು.
"ಮುಸ್ಲಿಂ ಸಮುದಾಯಕ್ಕೆ ಮತ್ತೆ ಮೀಸಲಾತಿ ನೀಡ್ತೀವಿ ಎನ್ನುತ್ತಾರೆ. ಸುಪ್ರೀಂ ಕೋರ್ಟ್ ವಿರುದ್ಧ ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಹೀಗೆ ಮಾಡ್ತಿದೆ. ಬಜರಂಗದಳ ಒಂದು ದೇಶಭಕ್ತ ಸಂಘಟನೆ. ಯಾವುದೇ ದೇಶ ಭಕ್ತ ಸಂಘಟನೆ ಬ್ಯಾನ್ ಮಾಡಿದ್ರೆ, ದೇಶ ಭಕ್ತಿ ಹೊಂದಿರುವ ವ್ಯಕ್ತಿಯನ್ನು ಹರಣ ಮಾಡಲು ಯತ್ನಿಸಿದರೆ ಬಿಜೆಪಿ ವಿರೋಧಿಸುತ್ತದೆ. ಅಕಸ್ಮಾತ್ ಹಿಂದೆ ಪಡೆಯುವುದಾದ್ರೆ ಕ್ಷಮೆ ಕೇಳಿ ಹಿಂಪಡೆಯಲಿ" ಎಂದರು.