ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಕಲ್ಯಾಣ ಮಂಟಪ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ರಾಜ್ಯ ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಕೆಯಾಗಿದೆ.
ನಗರದ ಪೊಲೀಸ್ ಭವನ ಕಟ್ಟಡದ ಪಕ್ಕದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸ್ಮಾರಕ ಸಮಿತಿಗೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಎಂದು 1981 ಆಗಸ್ಟ್ 6 ರಂದು 36 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆಗ ಸ್ವತಃ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅಂದಿನ ರಾಜ್ಯ ಸರ್ಕಾರಕ್ಕೆ ನಿವೇಶನ ಕೋರಿ ಪತ್ರ ಬರೆದ ಕಾರಣಕ್ಕೆ ನಿವೇಶನ ಮಂಜೂರು ಮಾಡಲಾಗಿತ್ತು. ಅದರನ್ವಯ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು.
ಆದರೆ, ಕಳೆದ 4 ವರ್ಷಗಳಿಂದ ಈ ಕಲ್ಯಾಣ ಮಂಟಪದಲ್ಲಿ ಮದುವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬದಲಿಗೆ, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ (ಕೆಪಿಇಎಸ್) ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಮಣಿಕಂಠ ರಾಠೋಡ್ ಲೋಕಾಯುಕ್ತ ಕಚೇರಿಗೆ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.