ಕಲಬುರಗಿ:ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ ಒಟ್ಟು 9 ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಈ 7 ಜನ ಶಾಸಕರ ಪೈಕಿ ನಾಲ್ವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು. ನಾಲ್ವರಲ್ಲಿ ಯಾರಿಗೆ ಮಂತ್ರಿ ಪಟ್ಟ ಒಲಿಯುತ್ತದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯವಾಗಿ, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಶಾಸಕರು ಮಂತ್ರಿ ಸ್ಥಾನದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣ ಪ್ರಕಾಶ ಪಾಟೀಲ್ ಮಲ್ಲಿಕಾರ್ಜುನ ಖರ್ಗೆ ಬೆಂಬಲಿತ ಶಾಸಕರಾದರೆ, ಡಾ.ಅಜಯ್ ಸಿಂಗ್ ಮತ್ತು ಬಿ.ಆರ್.ಪಾಟೀಲ್ ಸಿದ್ದರಾಮಯ್ಯ ಬೆಂಬಲಿತ ಶಾಸಕರಾಗಿದ್ದಾರೆ. ಖರ್ಗೆ ಬೆಂಬಲಿತ ಶಾಸಕರಿಗೆ ಮಂತ್ರಿಗಿರಿ ಒಲಿಯುತ್ತಾ ಅಥವಾ ಸಿದ್ದರಾಮಯ್ಯ ಬೆಂಬಲಿತ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತಾ? ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ:ಮುನಿಸು ಮುಗಿಸಿ 'ಕೈ' ಜೋಡಿಸಿದ ಸಿದ್ದು, ಡಿಕೆಶಿ: ಜನಪರ ಆಡಳಿತದ ಭರವಸೆ