ಕರ್ನಾಟಕ

karnataka

ETV Bharat / state

ವಿವೇಕ ಯೋಜನೆಯಡಿ ರಾಜ್ಯದಲ್ಲಿ ಪ್ರತಿ ವರ್ಷ 8 ಸಾವಿರ ಶಾಲಾ ಕೊಠಡಿ ನಿರ್ಮಾಣ: ಸಿಎಂ - cm talk on Construction of school rooms

ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ 15ರೊಳಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ 250 ಕೋಟಿ ರೂ. ಮೀಸಲಿಟ್ಟಿರುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

Kn_klb_
ಬಸವರಾಜ್​ ಬೊಮ್ಮಾಯಿ

By

Published : Nov 14, 2022, 5:50 PM IST

ಕಲಬುರಗಿ:ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಪ್ರತಿ ವರ್ಷ 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕಲಬುರಗಿ ತಾಲೂಕಿನ ಮಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕಾರ್ಯಕ್ರಮದಡಿ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ 8,000 ಕೊಠಡಿ ನಿರ್ಮಾಣ ಗುರಿ ಪೈಕಿ ಇಂದು ರಾಜ್ಯಾದ್ಯಂತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದೇ ವರ್ಷದಲ್ಲಿ ಕೊಠಡಿ ನಿರ್ಮಾಣವಾಗಲಿವೆ. ಇದರಲ್ಲಿ 2,000 ಕೊಠಡಿ ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತಿದೆ. ಇದಲ್ಲದೆ ಮುಂದಿನ 2 ವರ್ಷದಲ್ಲಿ ಸಹ 8,000 ಕೊಠಡಿ ನಿರ್ಮಿಸುವ ಮೂಲಕ ಶಾಲೆಗಳಲ್ಲಿನ ಮೂಲಸೌಕರ್ಯ ಬಲಪಡಿಸಲಾಗುವುದು ಎಂದು ತಿಳಿಸಿದರು. ಶಾಲಾ ದುರಸ್ತಿಗೆಂದೇ 200 ಕೋಟಿ ರೂ. ನೀಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ 15ರೊಳಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ 250 ಕೋಟಿ ರೂ. ಮೀಸಲಿಟ್ಟಿದೆ. ಕಲಬುರಗಿ ವಿಭಾಗದಲ್ಲಿ ತಲಾ 100 ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹೊಸದಾಗಿ ಮಂಜೂರಾತಿ ನೀಡಲಾಗಿದೆ. 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

ಸಿಎಂ ಬಸವರಾಜ್​ ಬೊಮ್ಮಾಯಿ ಪ್ರತಿಕ್ರಿಯೆ

4 ಸಾವಿರ ಅಂಗನವಾಡಿ ಕಟ್ಟಡ ನಿರ್ಮಾಣ:ಶಿಕ್ಷಣದ ತಳಹದಿ ಅಂಗನವಾಡಿ ಕಲಿಕೆ. ಹೀಗಾಗಿ ರಾಜ್ಯದಾದ್ಯಂತ ಪ್ರತಿ ವರ್ಷ ಮಂಜೂರು ಮಾಡುವುದನ್ನು ಹೊರತುಪಡಿಸಿ ವಿಶೇಷವಾಗಿ 4,000 ಅಂಗನವಾಡಿ ಕಟ್ಟಡ ಘೋಷಿಸಲಾಗಿದೆ. ಪ್ರತಿ 15 ಲಕ್ಷ ರೂ. ಮೊತ್ತದಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಲಿವೆ.

ಇದರಲ್ಲಿ 1,500 ಕಟ್ಟಡ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿವೆ. ಇದಲ್ಲದೆ ಈ ಭಾಗದಲ್ಲಿ 67 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ, 24 ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಮಕ್ಕಳಿಗೆ ಸಿಹಿ ತಿನ್ನಿಸಿದ ಸಿಎಂ:ನವೆಂಬರ್ 14 ಮಕ್ಕಳ ದಿನಾಚರಣೆಯಾಗಿದ್ದರಿಂದ ತಮ್ಮ ಭಾಷಣಕ್ಕೂ ಮುನ್ನ ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮಡಿಯಾಳ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.

ಇದನ್ನೂ ಓದಿ:ಇಡಿಯಿಂದ ಮತ್ತೆ ಸಮನ್ಸ್​ ಜಾರಿ.. ವಿಚಾರಣೆಗಾಗಿ ಉಜ್ಜಯಿನಿಯಿಂದ ದೆಹಲಿಗೆ ದೌಡಾಯಿಸಿದ ಡಿಕೆಶಿ

ABOUT THE AUTHOR

...view details