ಕಲಬುರಗಿ:ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಹೈದ್ರಾಬಾದ್ ಕರ್ನಾಟಕ ವಿಮೋಚನಾ ರೂವಾರಿ ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಯೋಜನೆಗಳ ಬಗ್ಗೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ವಿವರಿಸಿದರು. ಅಲ್ಲದೆ ನೂತನ ಸಾರಿಗೆ ಬಸ್, ಹೆಲ್ತ್ ಎಟಿಎಂ ಲೋಕಾರ್ಪಣೆ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವ ಮೂಲಕ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ. ಹೈದ್ರಾಬಾದ್ನಿಂದ ಬೆಳಗ್ಗೆ 8-30 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯ, ನೇರವಾಗಿ ಪಟೇಲ್ ವೃತ್ತಕ್ಕೆ ಆಗಮಿಸಿ, ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಬೃಹತ್ ಗಾತ್ರದ ಹೂಮಾಲೆ ಅರ್ಪಣೆ ಮಾಡಿದರು.
ಬಳಿಕ ನೇರವಾಗಿ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ಪೊಲೀಸ್, ಎನ್.ಸಿ.ಸಿ ಸೇರಿದಂತೆ ನಾನಾ ತುಕಡಿಗಳಿಂದ ನಡೆದ ಪರೇಡ್ ಗೌರವ ಪಡೆದರು. ಇದೇ ವೇಳೆ ಸ್ವತಂತ್ರ ಸೇನಾನಿಗಳಿಗೆ ಸಾಧಕರಿಗೆ ಅಭಿನಂದಿಸಿ ಗೌರವಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಜನಸ್ನೇಹಿ ಹೆಲ್ತ್ ಎಟಿಎಂ, ನರೇಗಾ ಯೋಜನೆ, ಕಾರ್ಮಿಕರ ಮಕ್ಕಳ ಪಾಲನೆ ಪೋಷಣೆಗಾಗಿ ಕೂಸಿನ ಮನೆ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದರು. ಕೆಕೆಆರ್ಟಿಸಿ ಖರೀದಿಸಿದ ನೂತನ 40 ಎಸಿ ಸ್ಲೀಪರ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್ಗಳ ಪೈಕಿ 7 ಬಸ್ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಕಲಬುರಗಿ ಜಿಲ್ಲೆಗೆ 182 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 50.77 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು ಹೇಳಿದರು. ನಿಜಾಮರ ಆಳ್ವಿಕೆಯಿಂದ ಭಾರತ ಒಕ್ಕೂಟ ಸೇರಿಸಲು ಚಳವಳಿ ನಡೆಸಿದ ಮಹನಿಯರನ್ನು ಸ್ಮರಿಸಿದರು.
ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಸರಮಾಲೆಯಿಂದ ತತ್ತರಿಸಿದ ನಾಡಿನ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ Univarsal Basic Income ಎಂಬ ಹೊಸ ಪರಿಕಲ್ಪನೆಯಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯು ಉತ್ತಮಗೊಳ್ಳುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗುವ ಅವಕಾಶವನ್ನು ನಾವು ಈ ಯೋಜನೆಗಳ ಮೂಲಕ ಕಲ್ಪಿಸಿದ್ದೇವೆ. ಶಕ್ತಿ, ಗೃಹ ಲಕ್ಷ್ಮಿ ಯೋಜನೆಗಳ ಅನುಕೂಲ ನೇರವಾಗಿ ಮಹಿಳೆಯರನ್ನೇ ತಲುಪುತ್ತಿದ್ದು, ಇದು ಅವರ ಶಿಕ್ಷಣ, ಆದಾಯ ಚಟುವಟಿಕೆಗಳಿಗೆ ಬೆಂಬಲವಾಗಿದೆ ಎಂದರು.
ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆ, ಹಸಿವು ಮುಕ್ತ ಕರ್ನಾಟಕ್ಕಾಗಿ “ಅನ್ನ ಭಾಗ್ಯ” “ಉಚಿತ ಬೆಳಕು, ಸುಸ್ಥಿರ ಬದುಕು” ಘೋಷವಾಕ್ಯದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ”ಯೋಜನೆ, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ”ಯೋಜನೆ ಜಾರಿಗೆ ತರಲಾಗಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ 1,500 ಮತ್ತು ಪದವಿ ತೇರ್ಗಡೆಯಾದ ನಿರುದ್ಯೋಗಿಗಳಿಗೆ ಮಾಸಿಕ 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ ತಿಳಿಸಿದಂತೆ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಜಿಲ್ಲೆಯವರೇ ಆದ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚಿಸಲಾಗಿದೆ. ಈಗಾಗಲೇ ಡಾ. ಅಜಯ್ ಸಿಂಗ್ ಅವರು ಪ್ರಥಮ ಮಂಡಳಿ ಸಭೆ ನಡೆಸಿ ಪ್ರಸಕ್ತ ಸಾಲಿಗೆ 3,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ. ಜೊತೆಗೆ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶೇ.25ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಈ ಭಾಗದಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡುತ್ತಿರುವುದಾಗಿ ವಿವರಿಸಿದರು.
ಈ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿ "ಅಕ್ಷರ ಆವಿಷ್ಕಾರ" ಯೋಜನೆ ರೂಪಿಸಿದೆ. ಇದರಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದಿಂದ 16,041 ಅತಿಥಿ ಶಿಕ್ಷಕರ ಭರ್ತಿ ಹೊರತಾಗಿ ಇನ್ನು ಖಾಲಿ ಉಳಿದ ಪ್ರಾಥಮಿಕ ಶಾಲೆ-2,566 ಮತ್ತು ಪ್ರೌಢ ಶಾಲೆ-52 ಸೇರಿದಂತೆ ಒಟ್ಟು 2,618 ಶಿಕ್ಷಕರ ಹುದ್ದೆಗಳಿಗೆ “ಅಕ್ಷರ ಮಿತ್ರ” ಪದನಾಮದಡಿ ಇದೇ ತಿಂಗಳ ಅಂತ್ಯಕ್ಕೆ ಭರ್ತಿ ಮಾಡಲು ಈಗಾಗಲೆ ಮಂಜೂರಾತಿ ನೀಡಿ 18.34 ಕೋಟಿ ರೂ. ಅನುದಾನ ನೀಡಿದೆ.
ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕ್ರಮವಾಗಿ 38 ಮತ್ತು 6 ತಾಲೂಕುಗಳು ಸೇರಿವೆ. ಇನ್ನು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಈಗಾಗಲೇ ಸರ್ಕಾರಿ ಆದೇಶ ಸಹ ಹೊರಡಿಸಿ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರು, ಮೇವು ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಬೆಳೆ ಹಾನಿ ಸಮೀಕ್ಷೆ ಮತ್ತಿತರ ಚಟುವಟಿಕೆಗಳನ್ನು ನಿಯಮಾನುಸಾರ, ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ:ಸೆ.25ರಂದು ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ 'ಜನತಾ ದರ್ಶನ'ಕ್ಕೆ ಸೂಚನೆ