ಕಲಬುರಗಿ:''ಸರ್ಕಾರದಲ್ಲಿ ಸಚಿವರು ಶಾಸಕರ ನಡುವೆ ಸಮನ್ವಯ ಸಮಿತಿ ಇರಬೇಕು, ಅದೇನು ತಪ್ಪಿಲ್ಲ. ಮುಖ್ಯಮಂತ್ರಿಗಳು ನಮ್ಮ ಶಾಸಕಾಂಗ ಪಕ್ಷದ ನಾಯಕರು ಆಗಿದ್ದಾರೆ. ಮುಖ್ಯಮಂತ್ರಿ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ನಡೆಸಬೇಕು. ಶಾಸಕರ ವಿಧಾನಸಭೆ ಕ್ಷೇತ್ರ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದಕ್ಕೆ ಅನುಕೂಲ ಆಗುತ್ತೆ'' ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜಿಲ್ಲಾವಾರು ಸಭೆ ನಡೆಸೋದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಮಂತ್ರಿಗಳು ಸರಿಯಿಲ್ಲ ಅಂತಿಲ್ಲ, ಕೆಲ ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳತ್ತಿಲ್ಲ. ಆದ್ರೆ, ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅನ್ನೋ ಭಾವನೆ ಯಾರೋ ಒಬ್ಬರಲ್ಲಿ ಬಂದಿರಬಹುದು. ಸಚಿವರು ಸರಿ ಇಲ್ಲ ಅಂತಾ ನಾವು ಹೇಳಿಲ್ಲ. ಒಬ್ಬರ ಮೇಲೆ ಅಸಮಾಧಾನ ಇಲ್ಲ. ನಮಗೆ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಅಷ್ಟೆ. ಬಿ.ಆರ್. ಪಾಟೀಲ್ ಅವರು ಲೆಟರ್ ರೆಡಿ ಮಾಡಿದ್ರು, ನಾನು ಸಹಿ ಮಾಡಿದ್ದೆ'' ಎಂದು ತಿಳಿಸಿದರು.
ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ:''ದೆಹಲಿಗೆ ಕರೆದಿರುವ ವಿಚಾರದಲ್ಲಿ ನಮಗೆ ಅಸಮಾಧಾನ ಇಲ್ಲ. ಲೋಕಸಭೆ ಚುನಾವಣೆ ಸಂಬಂಧ ಸಭೆ ಕರೆದಿರೋದು'' ಎಂದರು. ಜೆಡಿಎಸ್ನಿಂದ ಬಂದು ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರವಾಗಿ ಮಾತನಾಡಿದ ಅವರು, ''ಕೊಪ್ಪಳದ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತನೊಬ್ಬ ನೀವು ಹಿರಿಯರಿದ್ದಿರಿ ಸಚಿವರಾಗಿಲ್ಲ ಅಂತಾ ಹೇಳಿದ. ನಮ್ಮ ಕ್ಷೇತ್ರದ ಕಾರ್ಯಕರ್ತನೊಬ್ಬನನ್ನ ಅಧ್ಯಕ್ಷರನ್ನಾಗಿ ಮಾಡಬೇಕು ಅಂತಾ ಇದ್ದೀವಿ. ಆದ್ರೆ ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡೋದಕ್ಕೆ ಕೆಟಗರಿ ಬರಲಿಲ್ಲ, ಹಾಗಾಗಿ ಹೇಳಿದೆ. ರಾಜಕೀಯದಲ್ಲಿ ಸಿನಿಯರ್, ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದ್ರು ಮೋದಿ ಪ್ರಧಾನಿ ಆದ್ರು.