ಕಲಬುರಗಿ: ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಈ ಭಾಗದ ಜನರ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ವಾಸ್ತವ್ಯದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾಲ್ಕು ಕಡೆ ಗ್ರಾಮ ವಾಸ್ತವ್ಯ ಏರ್ಪಡಿಸಲಾಗಿತ್ತು. ಆದ್ರೆ, ಭಾರಿ ಮಳೆಯಿಂದ ಕಲಬುರಗಿಯ ಹೇರೂರು (ಬಿ) ಗ್ರಾಮದ ಗ್ರಾಮ ವಾಸ್ತವ್ಯ ಮುಂದೂಡಲಾಯ್ತು. ಆದ್ರೆ ಮುಂದಿನ ತಿಂಗಳು ಹೇರೂರು ಗ್ರಾಮಕ್ಕೆ ತೆರಳುತ್ತೇನೆ. ಹೇರೂರು ಗ್ರಾಮಸ್ಥರ ಹಲವು ಬೇಡಿಕೆ ಈಡೇರಿಕೆಗಾಗಿ ಈಗಾಗಲೇ 5 ಕೋಟಿ ಹಣ ಮಂಜೂರು ಮಾಡಲಾಗಿದೆ. ಎಲ್ಲ ಹಳ್ಳಿಗೂ ಆದ್ಯತೆ ಮೇರೆಗೆ ಪ್ರಗತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಇವರು ಸರ್ಕಾರ ಬೀಳಿಸುವವರು:
ವಾಲ್ಮೀಕಿ ಸಮುದಾಯದವರಿಗೆ ಶೇ. 7.5 ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಬೀಳಿಸುವುದಾಗಿ ಗಡುವು ನೀಡಿದ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳಿಗೆ ಸಿಎಂ ಪರೋಕ್ಷವಾಗಿ ತಿರುಗೇಟು ನೀಡಿದರು.
ರಸ್ತೆಯಲ್ಲಿ ನಿಂತು ಮೀಸಲಾತಿ ಕೊಡಲು ಸಾಧ್ಯವಿದೆಯಾ? ಅದರ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಸರ್ಕಾರ ಉರುಳಿಸುವ ಬಗ್ಗೆ ಬಹಳ ಜನ ಮಾತನಾಡುತ್ತಾರೆ. ಅದರ ಬಗ್ಗೆ ಏನು ಮಾತನಾಡುವುದು ಬಿಡಿ ಎಂದು ನಿರ್ಲಕ್ಷ್ಯ ಮನೋಭಾವನೆಯಿಂದ ತಿರುಗೇಟು ನೀಡಿದರು.
ಕಲಬುರಗಿ ಅಭಿವೃದ್ಧಿಗೆ 500 ಕೋಟಿ:
ಜಿಲ್ಲೆಯ ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ಶಿಕ್ಷಕರ ನೇಮಕಾತಿ, ಸಿಸಿ ರಸ್ತೆ ನಿರ್ಮಾಣ, ಯುವಕರಿಗೆ ಉದ್ಯೋಗ ನೀಡುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಗೆ 500 ಕೋಟಿ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.