ಬೆಂಗಳೂರು: ಕಲಬುರಗಿ ಇಎಸ್ಐ ಹಾಗು ವೈದ್ಯಕೀಯ ಕಾಲೇಜನ್ನು ನವದೆಹಲಿಯ ಏಮ್ಸ್ ಮಾದರಿಯಲ್ಲಿ ಉನ್ನತೀಕರಿಸುವ ರಾಜ್ಯದ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ರವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಮುಖಾಂತರ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಡಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಟ್ರಾಮಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಸಿಎಂ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಈ ಘಟಕವನ್ನು ಕೇಂದ್ರ ಹಾಗು ರಾಜ್ಯ ಸರ್ಕಾರದ ಸಹಯೋಗದ ಅಡಿಯಲ್ಲಿ 150 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟ್ರಾಮಾ ಕೇರ್ ಘಟಕ ಐಸಿಯು ಹಾಗು ತುರ್ತು ಚಿಕಿತ್ಸೆ ಹಾಸಿಗೆ ಸೇರಿ ಒಟ್ಟು 200 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಈ ಘಟಕಕ್ಕೆ ಅತ್ಯಾಧುನಿಕ ವೈದ್ಯಕೀಯ ಉಪಕರಣ ಒದಗಿಸಲಾಗಿದೆ. ನ್ಯೂರೋ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಅರ್ಥೋಪಿಡಿಕ್ಸ್, ರೇಡಿಯೋಲಜಿ ಹಾಗೂ ಅನಸ್ತೇಶಿಯಾ ಘಟಕ ಹೊಂದಿದೆ. ಬಳ್ಳಾರಿ ಸುತ್ತಮುತ್ತ ಜಿಲ್ಲೆ ಹಾಗು ಆಂಧ್ರಪ್ರದೇಶದದಿಂದ ಬರುವ ಸಾವಿರಾರು ರೋಗಿಗಳಿಗೆ ಈ ಆಸ್ಪತ್ರೆ ಸಂಜೀವಿನಿ ಆಗಲಿದೆ. ಈ ಹಿಂದೆ ತುರ್ತು ಚಿಕಿತ್ಸೆಗಾಗಿ ಬೆಂಗಳೂರು ಹಾಗು ಇತರ ಆಸ್ಪತ್ರೆಗೆ ಬರಬೇಕಾಗಿತ್ತು. ಈಗ ಸ್ಥಳೀಯವಾಗಿ ಚಿಕಿತ್ಸೆಗಳು ಅನುಕೂಲವಾಗಲಿದೆ. ಜನಸಾಮಾನ್ಯರಿಗೆ ಸುಲಭ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದ ಜನಜೀವನ ಸುಗಮಗೊಳಿಸಲು ಸರ್ಕಾರ ಶ್ರಮಿಸುತ್ತಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಜೊತೆ ಕೈಜೋಡಿಸಿ ಎಂದು ಜನತೆಗೆ ಹಾಗೂ ಸಂಘ ಸಂಸ್ಥೆಗಳಿಗೆ ಸಿಎಂ ಮನವಿ ಮಾಡಿದರು.