ಕಲಬುರಗಿ :ಜಿಲ್ಲೆಯ ಮಹಾಗಾಂವ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಸಮಾವೇಶಕ್ಕೆ ವರುಣ ಅಡ್ಡಿಪಡಿಸಿದ್ದಾನೆ. ಮಳೆಯಲ್ಲಿಯೇ ವೇದಿಕೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ನೇರವಾಗಿ ಮೈಕ್ ಬಳಿ ತೆರಳಿ ತಮ್ಮ ಭಾಷಣ ಆರಂಭಿಸಿದರು.
ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು. ಮುಳುಗುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೈಗೆ ಸ್ಟೇರಿಂಗ್ ಕೊಡಲಾಗಿದೆ. ಮುಳುಗಿದರೆ ಖರ್ಗೆ ಹೆಸರೇ ಬರಲಿ ಎಂದು ಗಾಂಧಿ ಕುಟುಂಬ ಯೋಜನೆ ಮಾಡಿದೆ. 2023 ರಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ಣಾಮ ಆಗಲಿದೆ ಎಂದು ಹೇಳಿದರು.
ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ದ್ರೋಹ ಬಗೆದಿದೆ. ಕಾಂಗ್ರೆಸ್ ನಾಯಕರು ವಕ್ಫ್ ಸಂಬಂಧಿತ ನೂರಾರು ಎಕ್ಕರೆ ಆಸ್ತಿಯನ್ನು ನುಂಗಿ ನೀರು ಕುಡಿದಿದ್ದಾರೆ. ಈ ಕುರಿತು ಇನ್ನಷ್ಟು ತನಿಖೆ ಅಗತ್ಯವಿದೆ. ಸದ್ಯದಲ್ಲೇ ತನಿಖೆಗೆ ಆದೇಶ ಮಾಡುವುದಾಗಿ ಸಿಎಂ ಹೇಳಿದರು. ಇದೆ ವೇಳೆ ಮಳೆ ನಿಲ್ಲುವರೆಗೆ ನಿಂತು ಬಳಿಕ ಸುರಕ್ಷಿತವಾಗಿ ಮನೆ ಸೇರುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಡೆಯಬೇಕಿದ್ದ ಉದ್ಘಾಟನಾ ಸಮಾರಂಭವನ್ನು ಸಿಎಂ ಭಾಷಣ ಮುಗಿಸಿದ ನಂತರ ದೀಪ ಬೆಳಗಿಸಿ ಉದ್ಘಾಟಿಸಿದರು. ಮಳೆಯ ಅಬ್ಬರದಿಂದ ಕೆಲವೆಡೆ ಪೆಂಡಾಲ್ ಕುಸಿದು ಜನರು ಮಳೆಗೆ ಒದ್ದೆಯಾಗಿದರು. ಮಳೆ ನಡುವೆಯೂ ನೆರೆದಿದ್ದ ಜನರು ಸಿಎಂ ಭಾಷಣವನ್ನು ಆಲಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಸೇ ಸಿಎಂಗೆ ಬಿಜೆಪಿ ಟಕ್ಕರ್: ವಾಚ್ ಪೇ, ಪಿಲ್ಲೋ ಪೇ ಮೂಲಕ ತಿರುಗೇಟು..!