ಕಲಬುರಗಿ:ಮೂವರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊರವಲಯದ ಹಾಗರಗಾ ರಸ್ತೆ ಬಳಿ ನಡೆದಿದೆ.
ಜಿಲ್ಲೆಯ ಖಾಜಾ ಕಾಲೋನಿ ನಿವಾಸಿ ಫಯಾಜ್ ಶೇಕ್ (25) ಕೊಲೆಯಾದ ಯುವಕ. ಇನ್ನು ಘಟನೆಯಲ್ಲಿ ಇಮ್ರಾನ್ ಹಾಗೂ ಯಾಕೂಬ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಸುಮಾರು 9:30ರ ವೇಳೆಗೆ ನಗರದ ಪೀರ್ ಬಂಗಾಲ ದರ್ಗಾದ ಬಳಿ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೂವರು ಯುವಕರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಫಯಾಜ್ ಶೇಕ್ ಮೃತಪಟ್ಟಿದ್ದು, ಇನ್ನುಳಿದ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಇನ್ನು ಈ ಕೃತ್ಯವನ್ನು ರೌಡಿ ಅಬು ಮೌಲಾನ್ ಬ್ರದರ್ಸ್ ಎಸಗಿದ್ದಾರೆಂಬ ಆರೋಪ ಕೇಳಿಬಂದಿದೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ರಿಯಲ್ ಎಸ್ಟೇಟ್ ಸಂಬಂಧಿತವಾಗಿದ್ದ ಹಳೆಯ ವೈಷ್ಯಮ್ಯದಿಂದ ನಡೆದ ಕೃತ್ಯ ಇದಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಅಬು ಮೌಲಾನ್ ಸೇರಿ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಮೃತನ ಸಂಬಂಧಿಗಳು ಆಗ್ರಹಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.