ಕಲಬುರಗಿ:ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಹುಸೇನ್ ಉಸ್ತಾದ ಹಾಗೂ ಪೊಲೀಸ್ ಕಮಿಷನರ್ ಚೇತನ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಘಟನೆ ಸಂಬಂಧ ನಾಸೀರ್ ಹುಸೇನ್ ಉಸ್ತಾದ ಸೇರಿ 8 ಜನರ ವಿರುದ್ಧ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಸೀರ್ ಹುಸೇನ್ ಉಸ್ತಾದ ಎ1 ಆರೋಪಿ ಎಂದು ಹೆಸರಿಸಲಾಗಿದೆ. ಇನ್ನುಳಿದಂತೆ ಅಫ್ಜಲ್ ಮಹಿಮ್ಮದ್, ಶಫಿ ಪಟೇಲ್, ಮುದಾಸಿರ್, ಗೌಸ್ ಭಾಗವಾನ್, ಮಜರ್ ಲಾತೋರೆ, ತಲಾಹ್ ಮತ್ತು ಸೋಹೆಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ವಿವರ: ನಗರದ ಮುಸ್ಲಿಂ ಚೌಕ್ ಬಳಿ ಬೀದಿ ಬದಿ ವ್ಯಾಪಾರದಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಕುರಿತಾಗಿ ಬಂದಿದ್ದ ದೂರು ಆಧರಿಸಿ ರಸ್ತೆ ಇಕಟ್ಟು ಪ್ರದೇಶ ತೆರವುಗೊಳಿಸಿಲು ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿಗಳು ತೆರಳಿದಾಗ ಸ್ಥಳೀಯ ವ್ಯಾಪಾರಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ, ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಉತ್ತರ ಕ್ಷೇತ್ರದ ಅಭ್ಯರ್ಥಿ ನಾಸೀರ್ ಹುಸೇನ್ ಉಸ್ತಾದ ಹಾಗೂ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ನಾಸೀರ್ ಹುಸೇನ್ ನೇತೃತ್ವದಲ್ಲಿ ಸ್ಥಳೀಯರು ರಸ್ತೆ ಮೇಲೆ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸರ ನಡೆ ಖಂಡಿಸಿದ್ದರು. ರಂಜಾನ್ ಹಿನ್ನೆಲೆ ವ್ಯಾಪಾರಸ್ಥರು ತಮ್ಮ ನಿಗದಿತ ಪ್ರದೇಶಕ್ಕಿಂತ ಕೊಂಚ ಮುಂದೆ ಬಂದಿರುತ್ತಾರೆ. ಹಬ್ಬ ಮುಗಿದ ನಂತರ ಯಥಾಸ್ಥಿತಿಗೆ ಬರುತ್ತಾರೆ. ಅಲ್ಲಿಯವರೆಗೆ ಪೊಲೀಸರು ಸಮಯವಕಾಶ ಕೊಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಬಗ್ಗೆ ರೋಜಾ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಬಸಾಪೂರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.