ಕಲಬುರಗಿ :ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಅಕ್ರಮನೇಮಕಾತಿ ಕುರಿತಾಗಿ ಸಿಐಡಿ ತನಿಖೆ ಚುರುಕುಗೊಂಡಿದೆ. ಈಗಾಗಲೇ ಹಲವರನ್ನು ಬಂಧಿಸಿದ ಪೊಲೀಸರು ಇಂದು ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ನಾಯಕಿ ದಿವ್ಯಾ ಹಾಗರಗಿ ಮನೆಗೆ ದಾಳಿ ನಡೆಸಿ ತಪಾಸಣೆಗೆ ಮುಂದಾಗಿದ್ದಾರೆ.
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ರಾಜ್ಯದಲ್ಲಿ 545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಇರುವ ಕಾರಣಕ್ಕೆ ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಡಿವೈಎಸ್ಪಿ ಶಂಕರಗೌಡ ನೇತೃತ್ವದ ತಂಡ ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಬಿಜೆಪಿ ನಾಯಕಿ ಹಾಗೂ ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಮನೆಗೆ ತಪಾಸಣೆಗೆ ಆಗಮಿಸಿದೆ.
ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆಗೆ ಸಿಐಡಿ ತಂಡ ದಾಳಿ ದಿವ್ಯಾ ಹಾಗರಗಿಗೆ ಸೇರಿದ್ದ ಜ್ಞಾನಜೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು. ಇದೇ ಶಾಲೆಯ ಮೂವರು ಮಹಿಳಾ ಕೊಠಡಿ ಮೇಲ್ವಿಚಾರಕರು, ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ ನಾಲ್ವರು ಅಭ್ಯರ್ಥಿಗಳು ಸೇರಿ ಒಟ್ಟು ಏಳು ಜನರನ್ನು ಈಗಾಗಲೇ ಸಿಐಡಿ ತಂಡ ಬಂಧಿಸಿದೆ.
ದಿವ್ಯಾ ಹಾಗರಗಿಗೆ ಈ ಶಾಲೆ ಸೇರಿದ್ದರಿಂದ ಇಂದು ಅವರ ಮನೆಗೆ ಸಿಐಡಿ ತಂಡ ದಾಳಿ ನಡೆಸಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ಸಿಐಡಿ ತಂಡ ದಿವ್ಯಾ ಅವರ ಪತಿ ರಾಜೇಶ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ದಿವ್ಯಾ ಹಾಗರಗಿ ವಿಜಯಪುರಕ್ಕೆ ಹೋಗಿದ್ದಾರೆ ಅಂತಾ ರಾಜೇಶ್ ಸಿಐಡಿ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಓದಿ:ಕೋವಿಡ್ ನಿಂದ ಗುಣಮುಖರಾದವರಲ್ಲಿ ಮಧುಮೇಹ ಉಲ್ಬಣ, ನಿಯಮಿತ ಪರೀಕ್ಷೆ ಅಗತ್ಯ: ಡಾ. ಸುದರ್ಶನ್