ಕಲಬುರಗಿ :ಗುರು ಬ್ರಹ್ಮ, ಗುರು ವಿಷ್ಣು ಗುರುದೇವೋ ಮಹೇಶ್ವರ.. ಗುರು ಸಾಕ್ಷಾತ್ ಪರಬ್ರಹ್ಮ.. ತಸ್ಮೈ ಶ್ರೀ ಗುರುವೇ ನಮಃ.. ಎಂಬಂತೆ ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಉನ್ನತ ಸ್ಥಾನ ನೀಡಲಾಗುತ್ತೆ. ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುವ ಗುರುಗಳನ್ನು ಗೌರವದಿಂದ ಕಾಣುತ್ತಾರೆ. ಶಿಕ್ಷಕರು ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರ ಜ್ಞಾನಾರ್ಜನೆಗೆ ಶ್ರಮಿಸುತ್ತಾರೆ. ಈ ನಡುವೆ ಗುರು ಶಿಷ್ಯರ ನಡುವೆ ಸಂಬಂಧ ಗಟ್ಟಿಯಾಗಿ ಬೆಳೆಯುತ್ತೆ. ಸರ್ಕಾರಿ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ ಬೇರೊಂದು ಶಾಲೆಗೆ ವರ್ಗಾವಣೆಯಾದ ಶಿಕ್ಷಕಿಗೆ ಮಕ್ಕಳು ಕಣ್ಣೀರ ಬೀಳ್ಕೊಡುಗೆ ಕೊಟ್ಟಿದ್ದಾರೆ. ಇಂತಹ ಅಪರೂಪದ ಘಟನೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚವಡಾಪುರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. 2014 ರಲ್ಲಿ ಯಡ್ರಾಮಿ ಗ್ರಾಮದಿಂದ ಚವಡಾಪುರ ಶಾಲೆಗೆ ಟಿಜಿಟಿ (PCM) ಗ್ರೇಡ್-2 ಶಿಕ್ಷಕಿಯಾಗಿ ಬಂದ ಸುನಿತಾ ಡಂಬಳ ಅವರು ಇದೀಗ ವರ್ಗಾವಣೆಯಾಗಿದ್ದಾರೆ.
ಕಳೆದ 9 ವರ್ಷದಿಂದ ಚವಡಾಪುರ ಶಾಲೆಯ ಮಕ್ಕಳಿಗೆ ಗಣಿತ ಬೋಧನೆ ಮಾಡುವ ಮೂಲಕ ಸುನಿತಾ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದರು. ಬೋಧನೆ ಜೊತೆಗೆ ಮಕ್ಕಳೊಂದಿಗೆ ಬೆರೆತು ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಸುನಿತಾ ಅವರು ಜೇವರ್ಗಿ ತಾಲ್ಲೂಕಿನ ಕುರಳಗೇರ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ.
ಈ ವರ್ಗಾವಣೆಯಿಂದ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳಿಗೆ ತೀವ್ರ ಬೇಸರ ಉಂಟುಮಾಡಿದ್ದು, ಶಾಲೆಯಲ್ಲಿ ಅಪಾರ ಪ್ರೀತಿ ಗಳಿಸಿದ್ದ ಶಿಕ್ಷಕಿಗೆ ಕಣ್ಣೀರಿಡುತ್ತ ಆತ್ಮೀಯವಾಗಿ ಎಲ್ಲ ಮಕ್ಕಳು ಬೀಳ್ಕೊಡುಗೆ ಕೊಟ್ಟಿದ್ದಾರೆ. ಶಾಲೆಯ ಶಿಕ್ಷಕಿಯರಾದ ದುಂಡಮ್ಮ ಹೆಗ್ಗಿ, ಲಕ್ಷ್ಮಿ ಸಜ್ಜನ, ಕಸ್ತೂರಿಬಾಯಿ ಮಡಿವಾಳ, ಲೀಲಾವತಿ ಜೋಶಿ, ಮಲ್ಲಮ್ಮ ಕುಂಬಾರ, ಮಲ್ಲಿಕಾರ್ಜುನ ಯಂಕಂಚಿ, ಅನುರಾಧಾ ಕಲಾಲ್, ಸವಿತಾ ಕಾಳೆ, ನವೀದ್ ಅಂಜುಮ್, ಶ್ರೀದೇವಿ ಬುಕ್ಕಾ, ನೀಲಮ್ಮ ವಡಗೇರಾ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭಧಲ್ಲಿ ಉಪಸ್ಥಿತರಿದ್ದರು.
ಭೀಮಳ್ಳಿ ಗ್ರಾಮದಲ್ಲೂ ನೆಚ್ಚಿನ ಶಿಕ್ಷಕಿಗೆ ಕಣ್ಣೀರ ಬೀಳ್ಕೊಡುಗೆ :ಮತ್ತೊಂದೆಡೆಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 15 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ನೆಚ್ಚಿನ ಶಿಕ್ಷಕಿ ಅಂಬಿಕಾ ಅವರಿಗೆ ಶಾಲೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡಲಾಯಿತು. ಅಂಬಿಕಾ ಅವರು ಹತಗುಂದಾ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿದ್ದಾರೆ.