ಕಲಬುರಗಿ:ಜಿಲ್ಲೆಯಕಮಲಾಪುರ ತಾಲೂಕಿನ ಓಕಳಿ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕಲಬುರಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಮಲಾಪುರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಂಬರೇಶ ಪಾಟೀಲ ಅವರು ನೀಡಿದ ದೂರಿನ ಮೇರೆಗೆ ಪಿಡಿಒ ಪ್ರವೀಣ ಕುಮಾರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾ.ಪಂ. ಇಒ ನೀಡಿದ ದೂರಿನ ವಿವರ: ಪಿಡಿಒ ಪ್ರವೀಣ ಕುಮಾರ 15ನೇ ಹಣಕಾಸಿನ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ. ಕಾಮಗಾರಿ ಕೈಗೊಳ್ಳದೆ, ಸಲಕರಣೆಗಳನ್ನು ಖರೀದಿಸದೆ ಸುಳ್ಳು ದಾಖಲಾತಿ ಸೃಷ್ಠಿಸಿ ₹46 ಲಕ್ಷ ಹಣ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಪಿಡಿಒ ಪ್ರವೀಣಕುಮಾರ, ಅಧ್ಯಕ್ಷೆ ಅಲ್ಕಾ ನರೋಣಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹುದ್ದೆಯಿಂದ ವಜಾಗೊಳಿಸುವಂತೆ ಓಕಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಕುಮಾರ ಶೆಟ್ಟಿ ಹಾಗೂ ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ದೂರು ನೀಡಿದ್ದರು.
ಈ ಕುರಿತು ತನಿಖೆ ನಡೆಸಲು ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಕಳೆದ ಅ.23ರಂದು ಓಕಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿತ್ತು. ದೂರಿಗೆ ಸಂಬಂಧಿಸಿದ ಮಾಹಿತಿ ಕುರಿತು ವಿಚಾರಿಸಿದರೆ ಅನಾರೋಗ್ಯದ ನೆಪವೊಡ್ಡಿ ಪಿಡಿಒ ಪ್ರವಿಣ ಕುಮಾರ 8 ದಿನಗಳ ಕಾಲಾವಕಾಶ ಕೋರಿದ್ದರು. ಐದು ದಿನ ಮುಂದೂಡಿ, ದೂರಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಕ್ರಿಯಾಯೋಜನೆ ಮೂಲಪ್ರತಿ, ನಗದು ಪುಸ್ತಕ, ಕಾಮಗಾರಿ ಓಚರ್ ಕಡತಗಳ ಜೊತೆಗೆ ಪೂರಕ ದಾಖಲೆಗಳಸಹಿತ ಖುದ್ದಾಗಿ ಹಾಜರಾಗಲು ಹಾಗೂ ತನಿಖೆಗೆ ಸಹಕರಿಸಲು ತಿಳಿಸಲಾಗಿತ್ತು.