ಕಲಬುರಗಿ:ಕಾರು ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾದ ಘಟನೆ ಚಿತ್ತಾಪುರ ತಾಲೂಕಿನ ಹಳಕರ್ಟಿ-ಲಾಡ್ಲಾಪುರ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಇಂದು ಸಂಭವಿಸಿದೆ.
ಶಹಬಾದ್ ಪಟ್ಟಣದ ನಿಜಾಂಬಜಾರ್ ನಿವಾಸಿಗಳಾದ ದಯಾನಂದ ದೇವಸಿಂಗ್ (8) ಮತ್ತು ರಮೇಶ ಪವಾರ (45) ಮೃತರು. ದೇವರ ಕಾರ್ಯಕ್ಕೆಂದು ಹೋಗಿ ಮರಳುವಾಗ ದುರ್ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ತಿರುಮಲೇಶ ಕುಂಬಾರ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.