ಕಲಬುರಗಿ : ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾಳೆ ಸಭೆ ನಡೆಯಲಿದೆ. ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಹಾಕಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇಂಡಿಯಾ ಒಕ್ಕೂಟ ಒಂದಾಗಿ, ಒಗ್ಗಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಅದೇ ರೀತಿ ಒಂದಾಗಿ ಕೆಲಸ ನಿರ್ವಹಿಸುತ್ತೇವೆ. ನಾಳೆ ದೆಹಲಿಯಲ್ಲಿ ಕೆಲವು ಘಟಕಗಳ ಸಭೆ ಕರೆದಿದ್ದೇವೆ. ಎಲ್ಲಾ ಮತಕ್ಷೇತ್ರಗಳಿಗೆ ಈಗಾಗಲೇ ಅಬ್ಸರ್ವರ್ (ವೀಕ್ಷಕ)ಗಳನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದರು.
ನೆರೆಯ ರಾಷ್ಟ್ರ ಮಾಲ್ಡೀವ್ಸ್ ವೈರತ್ವ ಸಾಧಿಸುತ್ತಿರುವ ಬಗ್ಗೆ ಖರ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಮೋದಿ ಅವರು ಬಂದ ಮೇಲೆ ಎಲ್ಲವನ್ನೂ ವೈಯಕ್ತಿವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ಅಕ್ಕಪಕ್ಕದವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ. ಇಂದಿರಾ ಗಾಂಧಿ ಯಾವ ರೀತಿ ಪಾಕಿಸ್ತಾನ ವಿರುದ್ಧ ಹೋರಾಡಿ ಬಾಂಗ್ಲಾದೇಶ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ ಎಂದರು.