ಕಲಬುರಗಿ:ಶ್ರೀರಾಮ ಕೇವಲ ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ಎಲ್ಲರಿಗೂ ಬೇಕಾದವನು ರಾಮ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಮ ಪೌರಾಣಿಕ ವ್ಯಕ್ತಿ ಎಂದು ಅಫಿಡವಿಟ್ ಹಾಕಿದವರು ಕಾಂಗ್ರೆಸ್ನವರು. ಕಪಿಲ್ ಸಿಬಲ್ ಅವರು ಅಯೋಧ್ಯೆ ಕೇಸ್ನಲ್ಲಿ ವಿರುದ್ದವಾಗಿ ವಾದ ಮಾಡಿದವರು. ಹೀಗಾಗಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲು ಅವರಿಗೆ ಹಿಂಜರಿಕೆ ಇರಬಹುದು. ಆದರೆ ರಾಮ ಎಲ್ಲರಿಗೂ ಸೇರಿದವನು. ಕೇವಲ ಬಿಜೆಪಿಗಷ್ಟೇ ಸೀಮಿತ ಅಲ್ಲ. ಯಾರು ರಾಮನನ್ನು ಫೋಲೋ ಮಾಡುತ್ತಾರೋ ಅವರು ಜಗತ್ತಿನಲ್ಲಿ ಒಳ್ಳೆಯವರಾಗಿದ್ದಾರೆ, ಭಯೋತ್ಪಾದಕರಾಗಿಲ್ಲ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ನ್ಯಾಯ ಯಾತ್ರೆ ವಿರುದ್ದ ಕಿಡಿಕಾರಿದ ಸಿ.ಟಿ.ರವಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ದೇಶಕ್ಕೆ ಅನ್ಯಾಯ ಮಾಡಿದೆ. 1947ರಲ್ಲಿ ಭಾರತ ವಿಭಜನೆಗೆ ಸಹಿ ಮಾಡಿದ್ದು ಕಾಂಗ್ರೆಸ್ ಪಕ್ಷ. ವಿಶ್ವಸಂಸ್ಥೆಯಲ್ಲಿ ಕಾಯಂ ಭದ್ರತಾ ಸ್ಥಾನ ಸಿಗುವ ಅವಕಾಶ ಬಂದಾಗಲೂ ಕಾಂಗ್ರೆಸ್ ತಿರಸ್ಕರಿಸಿತ್ತು ಎಂದು ದೂರಿದರು.