ಕಲಬುರಗಿ:ನಾಳೆಯಿಂದ ಹಳ್ಳಿಗಳಿಗೂ ಬಸ್ ಸಂಚಾರ ಆರಂಭಗೊಳ್ಳಲಿವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ನಾಳೆಯಿಂದ ಗ್ರಾಮಗಳಿಗೂ ಬಸ್ ಸೌಲಭ್ಯ: ಸಾರಿಗೆ ಸಚಿವ ಲಕ್ಷ್ಮಣ ಸವದಿ ನಗರದ ಐವಾನ್ ಶಾಹಿ ಗೆಸ್ಟ್ ಹೌಸ್ನಲ್ಲಿ ಮಾತನಾಡಿದ ಅವರು, ಕೊರೊನಾ ಜೊತೆಯಲ್ಲಿಯೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ನಾಳೆಯಿಂದ ಗ್ರಾಮೀಣ ಪ್ರದೇಶಕ್ಕೆ ಬಸ್ ಬಿಡಲು ನಿರ್ಧರಿಸಲಾಗಿದೆ. ಈಗಾಗಲೇ ಎರಡು ತಿಂಗಳ ಲಾಕ್ಡೌನ್ನಿಂದಾಗಿ ಸಾರಿಗೆ ಇಲಾಖೆಗೆ 2,200 ಕೋಟಿಗಿಂತಲೂ ಹೆಚ್ಚಿನ ನಷ್ಟವಾಗಿದೆ. ಬಸ್ ಸಂಚಾರ ಇಲ್ಲದಿದ್ದರೂ ಸಾರಿಗೆಯ 4 ವಲಯದ ನೌಕರರು, ಸಿಬ್ಬಂದಿಗೆ ಪ್ರತಿ ತಿಂಗಳು 326 ಕೋಟಿ ರೂಪಾಯಿ ವೇತನ ಪಾವತಿಸಲಾಗಿದೆ.
ಸದ್ಯ ಬಸ್ ಸಂಚಾರ ಆರಂಭಗೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆ ಮತ್ತಷ್ಟು ನಷ್ಟವಾಗುವ ನಿರೀಕ್ಷೆ ಇದೆ. ನಿತ್ಯ 5 ರಿಂದ 6 ಕೋಟಿ ರೂಪಾಯಿ ನಷ್ಟವಿದ್ದರೂ ಸೇವಾ ಮನೋಭಾವನೆಯಿಂದ ಬಸ್ ಸಂಚಾರ ಪ್ರಾರಂಭ ಮಾಡಲಾಗುತ್ತಿದೆ. ಒಟ್ಟು 3,000 ಕೋಟಿ ನಷ್ಟ ಅಂದಾಜಿಸಲಾಗಿದೆ.
ಇನ್ನು ಇಂದಿನಿಂದಲೇ ಎಸಿ, ನಾನ್ ಎಸಿ, ಸ್ಲೀಪ್ಪರ್ ಬಸ್ಗಳ ಬುಕ್ಕಿಂಗ್ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಗಳನ್ನು ಬಿಡಲಾಗುವುದು. ಗ್ರೀನ್ ವಲಯ ಹೊಂದಿರುವ ರಾಜ್ಯಗಳ ನಡುವೆ ಬಸ್ ಸಂಚಾರ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಆಯಾ ರಾಜ್ಯಗಳಿಂದ ಅನುಮತಿ ಸಿಕ್ಕರೆ ಬಸ್ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದರೂ ಸದ್ಯಕ್ಕೆ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ. ಸಿಬ್ಬಂದಿ ಸಂಬಳ ಕಡಿತ ಮಾಡುವುದು ಅಥವಾ ಕಡ್ಡಾಯ ರಜೆ ಮೇಲೆ ಕಳಿಸುವುದೆಲ್ಲ ಮಾಡುವಂತಿಲ್ಲ ಅಂತಹದ್ದೇನಾದರೂ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವರು ತಿಳಿಸಿದರು.