ಕಲಬುರಗಿ :ಈ ಜಿಲ್ಲೆ ರಾಜ್ಯದಲ್ಲೇ ಅತೀ ಹಿಂದುಳಿದ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ. ಅದಕ್ಕೆ ಸೂಕ್ತ ನಿದರ್ಶನವೆಂದ್ರೆ ಈ ಭಾಗದ ಪಟ್ಟಣ ಪ್ರದೇಶದಲ್ಲಿ ಇನ್ನೂ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಇದರಿಂದಾಗಿ ಇಂದಿಗೂ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಹೀಗಿದೆ ವಾಡಿ ಪಟ್ಟಣದ ಸ್ಥಿತಿ.. ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಇನ್ನೂ ಬಸ್ ನಿಲ್ದಾಣವಿಲ್ಲ. ಹೀಗಾಗಿ, ಬಸ್‌ಗಾಗಿ ಕಾಯುವ ಪ್ರಯಾಣಿಕರು ನಿತ್ಯವೂ ಮುಖ್ಯ ರಸ್ತೆಯ ಪಕ್ಕದಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಸಾರಿಗೆ ಬಸ್ ನೆಚ್ಚಿಕೊಂಡಿರುವ ಪಟ್ಟಣದ ಜನ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ಭಾಗಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇಷ್ಟೆಲ್ಲ ತೊಂದ್ರೆ ಅನುಭವಿಸುತ್ತಿದ್ರು ಬಸ್ ನಿಲ್ದಾಣ ಮಾಡಲು ಅಧಿಕಾರಿಗಳು ಮಾತ್ರ ಮುಂದಾಗುತ್ತಿಲ್ಲ.
ದಿನೇದಿನೆ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿರುವ ಈ ಪಟ್ಟಣ ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿ ಬೃಹತ್ ಎಸಿಸಿ ಸಿಮೆಂಟ್ ಫ್ಯಾಕ್ಟರಿ ಇದ್ದು, ದೇಶದ ನಾನಾ ಭಾಗದ ಸಾವಿರಾರು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಇವರೆಲ್ಲರೂ ಬಸ್ ನಿಲ್ದಾಣ ಇಲ್ಲದ ಕಾರಣ ಸಂಚಾರಕ್ಕೆ ಪರದಾಡುವಂತಾಗಿದೆ.
ಈ ಪಟ್ಟಣದಿಂದ ನಿತ್ಯ ನೂರಾರು ಬಸ್‌ಗಳು ಬೇರೆ ಬೇರೆ ಭಾಗಗಳಿಗೆ ಸಂಚಾರ ಮಾಡುತ್ತಿವೆ. ಪಕ್ಕದ ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತವೆ. ಆದ್ರೀಗ ಸ್ಥಳೀಯರಲ್ಲದೆ ಹೊರ ರಾಜ್ಯದ ಪ್ರಯಾಣಿಕರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ, ರಾಜಕಾಲುವೆ ಮೇಲೆ ಇದ್ದಿದ್ದ ಪುಟ್ಟ ಬಸ್ ನಿಲ್ದಾಣವನ್ನ ಕಳೆದ ಎಂಟು ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ವೇಳೆ ಬೀಳಿಸಿದ್ದರು.
ನಂತರ ರಾಜಕಾಲುವೆ ಮೇಲೆಯೇ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಕಾಮಗಾರಿಯನ್ನು ಅಂದು ಅರ್ಧಕ್ಕೆ ಕೈಬಿಡಲಾಗಿತ್ತು. ಅಲ್ಲದೆ ಪಟ್ಟಣದ ಒಳಭಾಗದಲ್ಲಿ ಎಲ್ಲಿಯೂ ಸರ್ಕಾರಿ ಜಾಗ ಇಲ್ಲದ ಕಾರಣ ಪಟ್ಟಣದ ಹೊರವಲಯದಲ್ಲಿ ಬಸ್ ನಿಲ್ದಾಣಕ್ಕೆ ಸ್ಥಳ ನಿಗದಿ ಮಾಡಲಾಗಿದೆ. ಸ್ಥಳ ನಿಗದಿ ಮಾಡಿ ಮೂರ್ನಾಲ್ಕು ವರ್ಷಗಳು ಕಳೆದಿದ್ದರೂ ಈವರೆಗೆ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿಲ್ಲ.