ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಹಾಡಹಗಲೇ ಅಟ್ಟಾಡಿಸಿ ಬಸ್ ಡ್ರೈವರ್ ಭೀಕರ ಹತ್ಯೆ - ಬ್ರಹ್ಮಪುರ ಠಾಣೆ ಪೊಲೀಸರು

ಕಲಬುರಗಿ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಬಸ್​ ಚಾಲಕನನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

Bus driver killed
ಬಸ್​ ಚಾಲಕನ ಹತ್ಯೆ

By

Published : May 11, 2023, 4:56 PM IST

Updated : May 11, 2023, 5:32 PM IST

ಡಿಸಿಪಿ ಆಡೂರು ಶ್ರೀನಿವಾಸಲು ಹೇಳಿಕೆ

ಕಲಬುರಗಿ:ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಾಲಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಕೆಆರ್‌ಟಿಸಿ ಬಸ್ ಚಾಲಕ ನಾಗಯ್ಯಸ್ವಾಮಿ (45) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೂಲತಃ ಅಫಜಲಪುರ ತಾಲೂಕಿನ‌ ಮದರಿ ಗ್ರಾಮದ ನಾಗಯ್ಯಸ್ವಾಮಿ, ಸದ್ಯ ಕಲಬುರಗಿಯ ಮಹಾದೇವ ನಗರದಲ್ಲಿ ವಾಸವಿದ್ದರು.

ಕಳೆದ 20 ವರ್ಷಗಳಿಂದ ಬಸ್ ಚಾಲಕನಾಗಿ‌ ಸೇವೆ ಸಲ್ಲಿಸುತ್ತಿದ್ದ ನಾಗಯ್ಯಸ್ವಾಮಿ ಅವರು ಕಲಬುರಗಿ ಡಿಪೋ ಸಂಖ್ಯೆ 3ರಲ್ಲಿ ಸೂಪರ್ ಮಾರ್ಕೆಟ್​ನಿಂದ ಮಿನಜಗಿ‌ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು‌ ಸಹ ಬೆಳಗ್ಗೆಯಿಂದ ಎರಡು ರೌಂಡ್ ಮಿನಜಗಿಗೆ ಹೋಗಿ ಬಂದಿದ್ದರು. ಮಧ್ಯಾಹ್ನ 1-30 ರ ಸುಮಾರಿಗೆ‌ ಮಿನಜಗಿಯಿಂದ ಸೂಪರ್ ಮಾರ್ಕೆಟ್​ ಸಿಟಿ ಬಸ್ ನಿಲ್ದಾಣದಲ್ಲಿ KA-32, F-1652 ಸಾರಿಗೆ ಬಸ್ ಚಲಾಯಿಸಿಕೊಂಡು ಬಂದಿದ್ದಾರೆ.

ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಕೆಳಗೆ ಇಳಿಯುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಕೈ ಹೆಬ್ಬೆರಳು ತುಂಡಾಗ್ತಿದ್ದಂತೆ ಬಸ್ ನಿಲ್ದಾಣ ಒಳಗೆ ಓಡಿದ ನಾಗಯ್ಯಸ್ವಾಮಿಯನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ‌ ಹತ್ಯೆಗೈದು ಪರಾರಿಯಾಗಿದ್ದಾರೆ. ಹೋಗುವಾಗ ಕೊಂಚ ದೂರದಲ್ಲಿ ನಿಂತಿದ್ದ ಬಸ್‌ವೊಂದರ ಬಳಿ ಮಾರಕಾಸ್ತ್ರ ಎಸೆದು‌ ಪರಾರಿಯಾಗಿದ್ದಾರೆ.

ಇದನ್ನೂ ಓದಿ:ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ.. ವೃದ್ಧೆ ಸ್ಥಳದಲ್ಲೇ ಸಾವು; ಮೊಮ್ಮಗನ ಸ್ಥಿತಿ ಗಂಭೀರ

ಸ್ಥಳಕ್ಕೆ ಡಿಸಿಪಿ ಆಡೂರು ಶ್ರೀನಿವಾಸಲು, ಬ್ರಹ್ಮಪುರ ಠಾಣೆ ಪೊಲೀಸರು, ಬೆರಳಚ್ಚು, ಡಾಗ್ ಸ್ಕ್ವಾಡ್ ಭೇಟಿ ನೀಡಿ‌ ಪರಿಶೀಲನೆ ಮಾಡಿದ್ದಾರೆ. ಕೊಲೆಗೆ ಹಳೆ ವೈಷಮ್ಯ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರ ಆಕ್ರಂದನ‌ ಮುಗಿಲು‌‌‌ ಮುಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪ್ರಕರಣದಿಂದ ಸಿಟಿ ಬಸ್ ನಿಲ್ದಾಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.

ಹತ್ಯೆ ಕುರಿತು ಡಿಸಿಪಿ ಆಡೂರು ಶ್ರೀನಿವಾಸಲು ಹೇಳಿಕೆ :'ಇವತ್ತು ಮಧ್ಯಾಹ್ನ 1.45 ರಿಂದ 2 ಗಂಟೆ ಅವಧಿಯಲ್ಲಿ ಬ್ರಹ್ಮಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ, ಸಿಟಿ ಬಸ್​ಸ್ಟಾಂಡ್​ ಬಳಿ ಕೆಕೆಆರ್​ಟಿಸಿ ಬಸ್​ ಚಾಲಕ ನಾಗಯ್ಯ ಸ್ವಾಮಿ ಕಲಬುರಗಿ ನಗರ. ಅವರನ್ನು ಅಪರಿಚಿತರು ಬಂದು ಮಚ್ಚಿನಿಂದ ಕೊಲೆ ಮಾಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ್ದೇವೆ. ಎಫ್​ಐಆರ್​ ದಾಖಲಿಸಿ ತನಿಖೆ ಮುಂದುವರೆಸುತ್ತೇವೆ. ಸದ್ಯ ನಮಗೆ ಹತ್ಯೆಗೆ ಸಂಬಂಧಿಸಿ ಮಾಹಿತಿ ಇಲ್ಲ. ಹತ್ಯೆ ಕುರಿತು ಮಾಹಿತಿ ತಿಳಿದ ಕೂಡಲೇ ನಾವು ಘಟನಾ ಸ್ಥಳಕ್ಕೆ ತಲುಪಿದ್ದೇವೆ. ಪ್ರಕರಣ ದಾಖಾಲಾದ ನಂತರ ಸಾಕ್ಷಿಗಳನ್ನು ಕಲೆ ಹಾಕುತ್ತೇವೆ. ಎಫ್​ಐಆರ್​ ದಾಖಲಾಗುತ್ತಿದೆ. ಕೊಲೆಗೆ ಸಂಬಂಧಿಸಿ ಪ್ರತ್ಯಕ್ಷದರ್ಶಿಗಳು ಆರೋಪಿಗಳನ್ನು ನೋಡಿದ್ದಾರೆಯೆ ಎಂದು ಪರಿಶೀಲನೆ ನಡೆಸಬೇಕಿದೆ' ಎಂದು ತಿಳಿಸಿದರು.

ಇದನ್ನೂ ಓದಿ:ದುರುದ್ದೇಶದಿಂದ ಸ್ಕೂಟರ್​ಗೆ ಕಾರು ಗುದ್ದಿದ ಆರೋಪ : ಇಬ್ಬರು ಸ್ಥಳದಲ್ಲೇ ಸಾವು

Last Updated : May 11, 2023, 5:32 PM IST

ABOUT THE AUTHOR

...view details