ಕಲಬುರಗಿ/ಬೆಂಗಳೂರು: ವಿಧಾನಸಭೆ ಉಪಾಧ್ಯಕ್ಷ ಅನಂದ್ ಮಾಮನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸವದತ್ತಿಗೆ ತೆರಳಬೇಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಬಂಧಿಯೊಬ್ಬರು ನಿಧನರಾದ ಹಿನ್ನೆಲೆ ಸವದತ್ತಿ ಪ್ರವಾಸ ರದ್ದುಪಡಿಸಿ ಶಿಕಾರಿಪುರಕ್ಕೆ ತೆರಳುತ್ತಿದ್ದಾರೆ. ಸವದತ್ತಿಗೆ ಸಿಎಂ ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ತೆರಳಿದರು.
ಸವದತ್ತಿಗೆ ಜೊತೆಯಾಗಿ ತೆರಳಲು ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದ್ದರು. ಒಟ್ಟಿಗೆ ವಿಶೇಷ ವಿಮಾನದಲ್ಲಿ ತೆರಳಲು ಸಿದ್ಧತೆ ನಡೆದಿತ್ತು. ಆದರೆ ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿಯೊಬ್ಬರು ನಿಧನರಾದ ಹಿನ್ನೆಲೆಯಲ್ಲಿ ಅನಂದ್ ಮಾಮನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿಲ್ಲ.
ಹುಬ್ಬಳ್ಳಿಯಲ್ಲೇ ಸಿಎಂ ವಾಸ್ತವ್ಯ:ಇಂದು ರಾತ್ರಿ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಬೊಮ್ಮಾಯಿ, ನಾಳೆ ಹುಬ್ಬಳ್ಳಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಭಾಗಿಯಾಗಲಿದ್ದು, ನಂತರ ನಾಳೆ ರಾತ್ರಿಯೂ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಂದು ರಾತ್ರಿ 10 ಗಂಟೆಗೆ ವಿಮಾನದ ಮೂಲಕ ಹೊರಟು, 11.15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಗಣ್ಯರು, ಸಾರ್ವಜನಿಕರಿಂದ ಆನಂದ ಮಾಮನಿ ಅಂತಿಮ ದರ್ಶನ
ಸಿಎಂ ಕಲಬುರಗಿ ಜಿಲ್ಲಾ ಪ್ರವಾಸ ರದ್ದು:ಆನಂದ್ ಮಾಮನಿ ನಿಧನ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದಿನಿ ಕಲಬುರಗಿ ಜಿಲ್ಲಾ ಪ್ರವಾಸ ರದ್ದುಗೊಳಿಸಿದ್ದಾರೆ. ಪೂರ್ವ ನಿಗದಿಯಂತೆ ಇಂದು ಜಿಲ್ಲೆಯ ಆಳಂದ ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಜನ ಸಂಕಲ್ಪ ಯಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗುಬೇಕಿತ್ತು. ಎರಡು ಕ್ಷೇತ್ರಗಳಲ್ಲಿ ನಾಡದೊರೆ ಸ್ವಾಗತಕ್ಕೆ ಸಿದ್ಧತೆ ಮಾಡಲಾಗಿತ್ತು. ಜನ ಸಂಕಲ್ಪ ಯಾತ್ರೆಗಾಗಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಎಲ್ಲಡೆ ಸ್ವಾಗತ ಕಮಾನುಗಳು, ಪ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಆದ್ರೆ, ಕೊನೆ ಗಳಿಗೆಯಲ್ಲಿ ಸಿಎಂ ಆಗಮನ ರದ್ದಾಗಿದೆ. ಸದ್ಯಕ್ಕೆ ರದ್ದಾಗಿರುವ ಕಾರ್ಯಕ್ರಮವನ್ನು ನ.06 ರಂದು ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.