ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ನಿರ್ಮಾಣವಾದ ಆರೇ ತಿಂಗಳಲ್ಲೇ ಸೇತುವೆ ಕೊಚ್ಚಿ ಹೋಗುವುದೇ? - ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಕುಸಿತ ಸುದ್ದಿ

ಹಲವು ವರ್ಷಗಳ ಹಿಂದೆ ನಿರ್ಮಿಸಿದ ಹಳೆ ಸೇತುವೆ ಗಟ್ಟಿಮುಟ್ಟಾಗಿ ನಿಂತಿರುವಾಗ, ಹೊಸ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಅಂತಾರೆ ಇಲ್ಲಿನ ಜನರು.

kalburgi
ಕಲಬುರಗಿ

By

Published : Oct 30, 2020, 1:00 PM IST

ಕಲಬುರಗಿ:ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಕೇವಲ ಆರು ತಿಂಗಳಿನಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ತೆರಿಗೆದಾರರ ಹಣ ಭೀಮಾ ನದಿಗೆ ಸುರಿದಂತಾಗಿದೆ.

ನಿರ್ಮಾಣವಾದ ಆರೇ ತಿಂಗಳಲ್ಲಿ ಸೇತುವೆ ಕೊಚ್ಚಿ ಹೋಗುವುದೇ?

ಎರಡು ತಾಲೂಕಿನ ನಡುವೆ ಸುಮಾರು 60 ಕಿ.ಮೀ ದೂರದ ಅಂತರ ತಪ್ಪಿಸಲು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಚಿನ್ಮಳ್ಳಿ ಬಳಿ ಭೀಮಾ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ. ಹಳೇ ಸೇತುವೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಇದೀಗ ನೋಡಲು ಅಸ್ಥಿಪಂಜರದಂತೆ ಕಾಣುತ್ತಿದೆ. ಸುಮಾರು 200 ಮೀಟರ್ ಉದ್ದದ ಲಿಂಕ್ ಸೇತುವೆ ನಿರ್ಮಾಣಕ್ಕೆ ಕೃಷ್ಣ ಭಾಗ್ಯ ಜಲನಿಗಮದಿಂದ ಬರೋಬ್ಬರಿ 4.90 ಕೋಟಿ ರೂ ಹಣ ಖರ್ಚು ಮಾಡಲಾಗಿದೆ.‌ ಸೇತುವೆಯ ಕೆಲಸ ಮುಗಿದು ಕೇವಲ ಆರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ.

ಲಿಂಕ್ ಸೇತುವೆ ಮೇಲೆ ಹಾಕಿರುವ ಕಂಬಗಳನ್ನು ಮುಟ್ಟಿದ್ರೆ ನೆಲಕ್ಕುರುಳುವ ಹಂತದಲ್ಲಿದೆ. ಸೇತುವೆ ಮೇಲೆ ಹಾಕಿರುವ ಡಾಂಬರು ಕೈಯಿಂದ ಎಳೆದರೆ ಕಿತ್ತು ಬರುತ್ತಿದೆ. ನೀರು ತಡೆಯಲು ಸೇತುವೆಯ ಬದಿಯಲ್ಲಿ ಅಳವಡಿಸಿರುವ ಕಲ್ಲುಗಳು ಸಲೀಸಾಗಿ ಹೊರಬರುತ್ತಿವೆ ಎಂದು ಈ ಮೊದಲೇ ಗ್ರಾಮಸ್ಥರು ಆರೋಪಿಸಿದ್ದರು. ಇದರ ಮಧ್ಯೆ ಮೊನ್ನೆ ಭೀಮಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ಇಡೀ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದಕ್ಕೆ ಕಾರಣ ಕೃಷ್ಣ ಭಾಗ್ಯ ಜಲನಿಗಮ ಅಧಿಕಾರಿಗಳ ಜಾಣ ಕುರುಡುತನ, ಗುತ್ತಿಗೆದಾರರ ಕಳಪೆ ಕಾಮಗಾರಿ ಅನ್ನೋದು ಸ್ಥಳೀಯರ ಆರೋಪ.

2007ರಲ್ಲಿ ಭೀಮಾ ನದಿಯಲ್ಲಿ ಉಂಟಾದ ಭಾರಿ ಪ್ರವಾಹಕ್ಕೆ ಚಿನ್ಮಳ್ಳಿ- ಕಲ್ಲೂರು ಬಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಪಕ್ಕದ ಭೂಮಿ ಕೊಚ್ಚಿ ಹೋಗಿ ಸೇತುವೆ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೇ ಸುತ್ತಲಿನ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ ನೂರಾರು ಎಕರೆ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಅನ್ನದಾತರು ಕಂಗಾಲಾಗಿದ್ದರು. ಗ್ರಾಮಸ್ಥರ ನಿರಂತರ ಹೋರಾಟದಿಂದ ಮತ್ತೆ ಸೇತುವೆಗೆ ಸಂಪರ್ಕಿಸಲು ತಡೆಗೋಡೆ, ರಸ್ತೆ ಕಾಮಗಾರಿ ಕೈಗೊಂಡು 4.90 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದ್ರೆ ಸಂಪೂರ್ಣ ಕಾಮಗಾರಿ ಕಳಪೆ ಆಗಿರುವ ಪರಿಣಾಮ ಪ್ರವಾಹದಲ್ಲಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಈ ಬಗ್ಗೆ ಕೆಬಿಜೆಎನ್​​ಎಲ್ ಅಧಿಕಾರಿಗಳನ್ನು ಕೇಳಿದ್ರೆ, ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಕಳಪೆ ಕಾಮಗಾರಿಯ ವಿಚಾರವನ್ನು ಒಬ್ಬರ ಮೇಲೊಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ.

ಜೇವರ್ಗಿ ಮತ್ತು ಅಫಜಲಪುರ ಎರಡು ತಾಲೂಕಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಈಗ ಹಾಳಾಗಿ ಹೋಗಿದ್ದು, ಜನರು ಮತ್ತೆ 60-70 ಕಿ. ಮೀ. ಸುತ್ತಾಕಿ ತಲುಪುವಂತಾಗಿದೆ. ಇಲಾಖೆ ಮೇಲಧಿಕಾರಿಗಳು, ಸರ್ಕಾರ ಇಂತಹ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಜನರ ಆಗ್ರಹವಾಗಿದೆ.

ABOUT THE AUTHOR

...view details