ಕಲಬುರಗಿ: ಪೋಷಕರು ಬೇಡ ಎಂದರೂ ಸ್ನೇಹಿತರೊಂದಿಗೆ ಬುದ್ಧವಿಹಾರ ನೋಡಲು ಬಂದಿದ್ದ ಬಾಲಕ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗ ನಡೆದಿದೆ. ಬೀದರ್ ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಆಶೀಶ್ ಗುಪ್ತಾ (15) ಮೃತಪಟ್ಟಿದ್ದಾನೆ.
ಕಲಬುರಗಿಯಲ್ಲಿದ್ದ ಸ್ನೇಹಿತನ ಮನೆಗೆ ಭೇಟಿ ಕೊಟ್ಟು ಆರು ಜನ ಸೇರಿಕೊಂಡು ನಗರದ ಶ್ರೀರಾಮತೀರ್ಥ ದೇವರ ದರ್ಶನ ಮಾಡಿದ್ದಾರೆ. ಬಳಿಕ ಶೌಚಾಲಯಕ್ಕೆಂದು ದೇವಸ್ಥಾನದ ಹಿಂಭಾಗದ ಕಲ್ಲು ಕ್ವಾರಿ ಬಳಿ ಹೋಗಿದ್ದಾರೆ. ಶೌಚ ಮುಗಿಸಿಕೊಂಡು ನೀರು ತುಂಬಿದ್ದ ಕಲ್ಲಿನ ಕ್ವಾರಿಯಲ್ಲಿ ಈಜಾಡುವಾಗ ಆಶೀಶ್ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಸ್ನೇಹಿತರು ಅಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರಿಂದ ಸೀರೆ ಪಡೆದು ಆಶೀಶ್‌ನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಫಲ ನೀಡಲಿಲ್ಲ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ನೀರಿನಲ್ಲಿ ಮುಳುಗಿದ್ದ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ನಾಲ್ಕೈದು ಗಂಟೆಗಳ ಕಾಲ ಶೋಧಿಸಿ ಮೃತದೇಹ ಹೊರತೆಗೆದಿದ್ದಾರೆ. ಪೋಷಕರು ಬೇಡ ಎಂದು ಎಷ್ಟೇ ಹೇಳಿದರೂ ಕೇಳದೇ ಬಾಲಕ ತನ್ನ ಸ್ನೇಹಿತರ ಜೊತೆಗೂಡಿ ಇಲ್ಲಿಗೆ ಬಂದಿದ್ದ. ಬುದ್ದ ವಿಹಾರ ವೀಕ್ಷಣೆ ಮಾಡುವ ಹಂಬಲದಿಂದ ಬಂದಿದ್ದು ನೋಡುವುದಕ್ಕೂ ಮುನ್ನವೇ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.