ಕಲಬುರಗಿ:2020ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಭಾರಿ ಮಳೆಯಿಂದ ಕಲಬುರಗಿ ತಾಲೂಕಿನ ಬೋಸಗಾ ಕೆರೆ ತುಂಬಿ ತುಳುಕಿತ್ತು. ನೀರಿನ ರಭಸಕ್ಕೆ ಕೆರೆ ಕೋಡಿ ಬಿದ್ದು ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ ಬಿ.ಎಸ್ ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ವೈಮಾನಿಕ ಸಮಿಕ್ಷೆ ನಡೆಸಿ, ಹಾಳಾದ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡುವಂತೆ ಸೂಚಿಸಿದ್ದರು.
ಬಿಎಸ್ವೈ ಸೂಚನೆ ನೀಡಿ ಸರಿ ಸುಮಾರು 2 ವರ್ಷಗಳು ಗತಿಸಿದರೂ ಇನ್ನೂ ಕಾಮಗಾರಿ ಆಗಿಲ್ಲ. ಈ ನಡುವೆ ಈ ಬಾರಿ ಕೂಡ ಭಾರಿ ಮಳೆ ಕಾರಣ ಕೆರೆ ತುಂಬಿ ಮತ್ತೆ ಕೋಡಿ ಬಿದ್ದು, ರೈತರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ರಸ್ತೆ ಕೂಡಾ ಕೊಚ್ಚಿಕೊಂಡು ಹೋಗಿದೆ.
ರಸ್ತೆ ಕೊಚ್ಚಿ ಹೋಗಿ ಒಂದು ತಿಂಗಳಾದರೂ ಜಿಲ್ಲಾಡಳಿತವಾಗಲಿ ಅಥವಾ ಅಧಿಕಾರಿಗಳಾಗಲೀ ಈ ಕಡೆ ಸುಳಿದಿಲ್ಲ. ರಸ್ತೆ ಸಂಪರ್ಕ ಕಡಿತದಿಂದ ಬೋಸಗಾದಿಂದ- ಭೀಮಳ್ಳಿ ಹೋಗುವ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯಿಂದ ಭೀಮಳ್ಳಿ 5 ಕಿ.ಮೀ ಆಗಲಿದೆ. ಸುತ್ತಿ ಬಳಸಿ ಬರಬೇಕಾದರೆ 16-18 ಕಿ.ಮೀ ಆಗಲಿದೆ.