ಕಲಬುರಗಿ :ರೈತರಿಗೆ ಮಾರಕ ಎನ್ನಲಾಗುತ್ತಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕೊಟ್ಟಿದ್ದ ಭಾರತ್ ಬಂದ್ ಕಲಬುರಗಿಯಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.
ಕಲಬುರಗಿಯಲ್ಲಿ ಪ್ರತಿಭಟನೆ ಯಶಸ್ವಿಯಾಗಿದ್ರೆ, ಬಂದ್ ವಿಫಲವಾಗಿದೆ. ಆದ್ರೆ, ಬಂದ್ ಬಿಸಿ ಸಾರಿಗೆ ಬಸ್ ಪ್ರಯಾಣಿಕರಿಗೆ ಮಾತ್ರ ತಟ್ಟಿತ್ತು.
ಕಲಬುರಗಿಯಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಬೇಕೆಬೇಕು ನ್ಯಾಯಬೇಕು, ರೈತರಿಗೆ ಮರಣ ಶಾಸನ ವಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುವ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 6 ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ರೈತ ಸಂಘಟನೆ, ಹಸಿರು ಸೇನೆ, ದಲಿತ-ಕನ್ನಡ- ಕಾರ್ಮಿಕ ಪರ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಸೇರಿ 18ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಸ್ ನಿಲ್ದಾಣದ ಗೇಟ್ ಹಾಗೂ ರಸ್ತೆ ಮೇಲೆ ಕುಳಿತು ಹೋರಾಟಗಾರರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ಕಾವೇರುತ್ತಿದ್ದಂತೆ ಬೆಳಗ್ಗೆ 5ಗಂಟೆಗೆ ಆರಂಭವಾಗಿದ್ದ ಸಾರಿಗೆ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗಿತ್ತು. ಹೀಗಾಗಿ, ಸಾರಿಗೆ ಬಸ್ ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿತ್ತು. ಐದಾರು ಗಂಟೆಗಳ ಕಾಲ ಸಾರಿಗೆ ಬಸ್ ಸಂಚಾರ್ ಸ್ಥಗಿತದಿಂದ ಪ್ರಯಾಣಿಕರು ಸಂಚರಿಸಲಾಗದೆ ಪರದಾಡಿದ್ರು.
ಒಂದೆಡೆ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ರೆ, ಆಟೋ, ಗೂಡ್ಸ್ ಹಾಗೂ ವಾಹನ ಸವಾರರು ಓಡಾಡುತ್ತಿದ್ದ ದೃಶ್ಯ ಕಂಡು ಬಂದವು. ಇನ್ನು, ಭಾರತ್ ಬಂದ್ ರೈತರ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ಕೂಡ ಸಾಥ್ ಕೊಟ್ಟು ರಸ್ತೆಗಿಳಿದು ಬೈಕ್ ಹಾಗೂ ಕಾರ ರ್ಯಾಲಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಬಸ್ ನಿಲ್ದಾಣ ಸೇರಿ ಕಲಬುರಗಿ ರಿಂಗ್ ರಸ್ತೆಯ ಎಲ್ಲಾ ವೃತ್ತಗಳಲ್ಲೂ ಹೋರಾಟಗಾರರು ನಾಕಾ ಬಂದಿ ನಡೆಸಿ ತೀವ್ರ ಪ್ರತಿಭಟನೆ ನಡೆಸಿದ್ರು. ಮಧ್ಯಾಹ್ನ 1 ಗಂಟೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಜಮಾಯಿಸಿದ ಹೋರಾಟಗಾರರು, ಎಪಿಎಂಸಿಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದವರೆಗೆ ಬೃಹತ್ ಪ್ರತಿಭನಟಾ ರ್ಯಾಲಿ ನಡೆಸಿದರು.
ರ್ಯಾಲಿ ಉದ್ದಕ್ಕೂ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತ ಆಕ್ರೋಶ ಹೊರ ಹಾಕಿದ ಹೋರಾಟಗಾರರು, ರೈತರಿಗೆ ಮರಣ ಶಾಸನ ಬರೆಯುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಘೋಷಣೆ ಕೂಗಿ ಒತ್ತಾಯಿಸಿದರು. ಜಗತ್ ವೃತ್ತದಲ್ಲಿ ಹೋರಾಟ ಮುಕ್ತಾಯಗೊಳಿಸಲಾಯಿತು.
ಬಂದ್ ಹಿನ್ನೆಲೆ ಒಂದೆಡೆ ರೈತರು ವಿವಿಧ ಸಂಘಟನೆ ಕಾರ್ಯಕರ್ತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ರೆ, ವರ್ತಕರು ಮಾತ್ರ ಅಂಗಡಿ-ಮುಂಗಟ್ಟುಗಳನ್ನು ಒಪನ್ ಮಾಡಿ ವ್ಯಾಪಾರ ನಡೆಸುತ್ತಿದ್ದರು. ಬಂದ್‌ಗೆ ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ನಗರದ ಸೂಪರ್ ಮಾರ್ಕೆಟ್ ಸೇರಿದಂತೆ ಎಲ್ಲೆಡೆ ಅಂಗಡಿ-ಮುಂಗಟ್ಟುಗಳು ಎಂದಿನಂತೆ ಒಪನ್ ಆಗಿದ್ದವು. ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.