ಕಲಬುರಗಿ:ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಶುಕ್ರವಾರ ಸಂಜೆ ಮಾಡಬೂಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಮಣಿಕಂಠ ರಾಠೋಡ ಬಂಧನಕ್ಕೆ ಒಳಗಾಗಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ (ಆ. 23) ಬೆಳ್ಳಂಬೆಳಗ್ಗೆ ಕಲಬುರಗಿಯ ಗಂಜ್ ಪ್ರದೇಶದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್ನಲ್ಲಿರುವ ಮಣಿಕಂಠ ರಾಠೋಡ್ ಮನೆಯಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬುಧವಾರ ಸಂಜೆಯೇ ಠಾಣೆ ಜಾಮೀನಿನ ಅಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ಶುಕ್ರವಾರ ಸಾಯಂಕಾಲ ಮತ್ತೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಗುರ್ತಿ ಗ್ರಾಮದ ಯುವಕ ದೇವಾನಂದ ಕೊರಬಾ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 23ರಂದು ಚಿತ್ತಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವಿಚಾರದ ಬಗ್ಗೆ ಮಣಿಕಂಠ ರಾಠೋಡ್ ತಾವು ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಣಿಕಂಠ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಠಾಣೆ ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು.