ಕಲಬುರಗಿ:ನಗರ ಪೊಲೀಸ್ ಕಮಿಷನರ್ ವೈ.ಎಸ್ ರವಿಕುಮಾರ ಪತ್ನಿ ರೂಪಾಲಿ ನನಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದಾಗ ತಮ್ಮ ಪತಿಗೆ ಹೇಳಿ ಗಡಿಪಾರು ಶಿಕ್ಷೆ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಠೋಡ್, ದಸರಾ ಸಂದರ್ಭದಲ್ಲಿ ರೂಪಾಲಿ ದಾಂಡಿಯಾ ನೈಟ್ ಆಯೋಜಿಸಿದ್ದರು. ನನಗೆ ಸಿಂಗರ್ಸ್, ಸೆಲೇಬ್ರಿಟಿಗಳು ಪರಿಚಯ ಇರೋದರಿಂದ ನನ್ನ ಮುಖಾಂತರ ಸಿಂಗರ್ಗಳನ್ನ ಬುಕ್ ಮಾಡಿಸಿದ್ದರು. ಮುಂಬೈನಲ್ಲಿ ಸಿಂಗರ್ಗಳನ್ನ ಬುಕ್ ಮಾಡುವಾಗ ಮೂರು ಲಕ್ಷ ಅಡ್ವಾನ್ಸ್ ಹಣ ನಾನೇ ಕೊಟ್ಟಿದ್ದೆ. ಸ್ವತಃ ರವಿಕುಮಾರ ಹಾಗೂ ಅವರ ಪತ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡ್ಯಾನ್ಸ್ ಕೂಡಾ ಮಾಡಿದ್ದಾರೆ.
ಕಾರ್ಯಕ್ರಮದ ನಂತರ ಸಿಂಗರ್ಗಳಿಗೆ ನೀಡಬೇಕಾದ ಬಾಕಿ ಹಣ ಕೇಳಿದರೆ ಕೊಡದೇ, ನನಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಖರ್ಚು ಭರಿಸುವಂತೆ ನನಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಅವರೊಂದಿಗೆ ಸಂಭಾಷಣೆ ನಡೆಸಿರುವುದಾಗಿ ಹೇಳಿ ಆಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದಾರೆ.