ಕಲಬುರಗಿ: ಬಿಜೆಪಿ ಸನ್ಯಾಸಿ ಪಾರ್ಟಿಯಲ್ಲ ದೇಶದಲ್ಲಿ ಒಳ್ಳೆ ಆಡಳಿತ ನೀಡುವ ಗುರಿ ಹೊಂದಿರುವ ಪಾರ್ಟಿ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ಕುರಿತು ಅವರು ಪ್ರತಿಕ್ರಿಯಿಸಿದ್ದು, ನಾವು ಆಪರೇಷನ್ ಕಮಲ ಮಾಡಿಲ್ಲ, ಅವರಾಗಿಯೇ ನಮ್ಮ ಹತ್ತಿರ ಬಂದಾಗ ಸರ್ಕಾರ ರಚನೆ ಮಾಡಿ ಒಳ್ಳೆ ಆಡಳಿತ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ನಿರಾಣಿ, ಕೆಲ ಹಿರಿಯ ಪ್ರಜ್ಞಾವಂತರು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಎನ್ನುತ್ತಿದ್ದಾರೆ. ಆಂತರಿಕ ಕಲಹದಿಂದ ಅಲ್ಲಿ ರಾಜಕೀಯ ಬಿಕ್ಕಟ್ಟು ಉದ್ಬವಿಸಿದೆಯೇ ಹೊರತು, ನಾವಾಗಿಯೇ ಯಾರನ್ನೂ ಕರೆದಿಲ್ಲ. ಶಾಸಕರೇನು ಚಿಕ್ಕ ಮಕ್ಕಳಲ್ಲ, ಯಾರನ್ನು ನಾವು ಅಪಹರಿಸಿಲ್ಲ, ನಾವಾಗಿಯೇ ಅಪಹರಿಸಿ ಆಪರೇಷನ್ ಕಮಲ ಮಾಡಿದ್ದರೆ, ನಮ್ಮ ಮೇಲೆ ಆರೋಪ ಮಾಡಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಮೂರು ಪಕ್ಷಗಳು ಸೇರಿ ಸರ್ಕಾರ ಮಾಡಿರುವುದೇ ಒಂದು ಅನೈತಿಕ. ಶಿವಸೇನೆ ಜೊತೆ ನಮ್ಮದು ಹಳೆಯ ಸಂಬಂಧವಿದೆ. 25 ವರ್ಷಗಳಿಂದ ನಾವು ಒಟ್ಟಿಗೆ ಇದ್ದೆವು. ಮೂವರು ಸೇರಿ ಒಬ್ಬರ ಕಡೆ ಬ್ರೇಕ್, ಒಬ್ಬರ ಕಡೆ ಸ್ಟೇರಿಂಗ್, ಇನ್ನೊಬ್ಬರ ಕಡೆ ಎಕ್ಸಲೇಟರ್ ಇರಿವುದರಿಂದ ಗಾಡಿ ಸುಸೂತ್ರವಾಗಿ ನಡೆಯುತ್ತಿಲ್ಲ. ಈಗಾಗಲೇ ಶಿವಸೇನೆಯ ಅತಿ ಹೆಚ್ಚು ಶಾಸಕರು ಸರ್ಕಾರದಿಂದ ಹೊರಗಡೆ ಬಂದಿದ್ದಾರೆ. ಅವರೆಲ್ಲ ಬಿಜೆಪಿ ಕಡೆ ಬರ್ತಾರೆ ಎನ್ನುವ ವಿಶ್ವಾಸ ಇದೆ ಎಂದು ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಲ್ಲ:ಕಲ್ಯಾಣ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದಿದೆಯೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಧಾನಸಭೆ ಚುನಾವಣೆ ಇನ್ನೂ ದೂರವಿದೆ. ಇಲ್ಲಿ ಆಪರೇಷನ್ ಕಮಲ ಮಾಡೋದಿಲ್ಲ, ಯಾರಾದ್ರೂ ಸ್ವಇಚ್ಛೆಯಿಂದ ಪಕ್ಷಕ್ಕೆ ಬರಲು ಸಿದ್ಧವಿದ್ರೆ ಸ್ಥಳೀಯ ಬಿಜೆಪಿ ನಾಯಕರ ಅಭಿಪ್ರಾಯ ಪಡೆದು ಪಕ್ಷಕ್ಕೆ ಬರಲಿ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ರಾಷ್ಟ್ರದ ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ: ಕಟೀಲ್