ಕಲಬುರಗಿ:ಮತದಾನಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ ಇರುವಾಗಲೇ ಪಕ್ಷದ 11 ಕಾರ್ಯಕರ್ತರನ್ನು ಬಿಜೆಪಿ ಉಚ್ಛಾಟಿಸಿದೆ. ಕ್ಷೇತ್ರದ ಘಟಾನುಘಟಿ ಮುಖಂಡರು ಮಾಲೀಕಯ್ಯ ಗುತ್ತೇದಾರ್‌ಗೆ ಕೈಕೊಟ್ಟು ಇವರ ಸಹೋದರ, ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ್ ಅವರನ್ನು ಬೆಂಬಲಿಸಿ ಮತಬೇಟೆ ಮಾಡುತ್ತಿದ್ದಾರೆ. ಶಿವರಾಜ ಸಜ್ಜನ್, ವಿಶ್ವನಾಥ್ ರೇವೂರ್, ರಾಜು ಜಿಡ್ಡಗಿ ಸೇರಿದಂತೆ ಹನ್ನೊಂದು ಪ್ರಮುಖ ಮುಖಂಡರು ಬಿಜೆಪಿ ಬದಲು ಪಕ್ಷೇತರ ಅಭ್ಯರ್ಥಿ ಸಪೋರ್ಟ್ ಮಾಡುತ್ತಿದ್ದಾರೆ. ಇದನ್ನರಿತ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಇವರೆಲ್ಲರನ್ನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಅಣ್ಣ ಮಾಲೀಕಯ್ಯಗೆ ಸೆಡ್ಡು ಹೊಡೆದಿರುವ ತಮ್ಮ ನಿತಿನ್ ಗುತ್ತೇದಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮುಖಂಡರಿಂದಲೇ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಮಾಲೀಕಯ್ಯಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಗೋಚರಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗುತ್ತೇದಾರ್ ಸಹೋದರರ ಎಲೆಕ್ಷನ್ ಫೈಟ್ನಿಂದ ಅಫಜಲಪುರ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.
ಮಾಲೀಕಯ್ಯ ಗುತ್ತೇದಾರ್ ಕಳೆದ ಚುನಾವಣೆಯಲ್ಲಿ ಮುಂದಿನ ಅಭ್ಯರ್ಥಿ ನೀನೇ ಎಂದು ನಿತಿನ್ಗೆ ಹೇಳಿದ್ದರಂತೆ. ಆದ್ರೆ ಈ ಬಾರಿಯೂ ಕೊಟ್ಟ ಮಾತು ತಪ್ಪಿ ತಾವೇ ಸ್ಪರ್ಧೆಗೆ ಇಳಿದಿದ್ದಾರೆ ಅನ್ನೋದು ನಿತಿನ್ ಆರೋಪ. ಇದಕ್ಕೆ ಪ್ರತಿಯಾಗಿ ಇದು ನನ್ನ ಕೊನೆಯ ಚುನಾವಣೆ. ಕ್ಷೇತ್ರದ ಜನ ಒತ್ತಡ ಹಾಕ್ತಿದ್ದಾರೆ. ಹೀಗಾಗಿ ಕೊನೆಯದಾಗಿ ಸ್ಪರ್ಧೆ ಮಾಡ್ತಿದ್ದೇನೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.