ಕಲಬುರಗಿ: ಬಿಜೆಪಿ ಪಕ್ಷವನ್ನು ಚಿತ್ತಾಪುರ ಕ್ಷೇತ್ರದಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದಂತಹ ಬಿಜೆಪಿಯ ಕಟ್ಟಾಳು, ಮಾಜಿ ಶಾಸಕ ದಿ.ವಾಲ್ಮೀಕ ನಾಯಕ ಅವರ ಅಕಾಲಿಕ ನಿಧನದ ನಂತರ ಚಿತ್ತಾಪುರ ಬಿಜೆಪಿಗೆ ಯಾರು ದಿಕ್ಕು ಎಂಬಂತಾಗಿದೆ.
ಬಿಜೆಪಿ ಹೈಕಮಾಂಡ್ ಸೇರಿದಂತೆ ರಾಜ್ಯ ನಾಯಕರಲ್ಲಿ ಚಿತ್ತಾಪುರ ಎಂದ ತಕ್ಷಣ ನೆನಪಾಗುತ್ತಿದ್ದದು ದಿವಂಗತ ಮಾಜಿ ಶಾಸಕ ವಾಲ್ಮೀಕ ನಾಯಕ. ಅವರ ಅಗಲಿಕೆಯ ನಂತರ ಕೇವಲ ಚಿತ್ತಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರವಲ್ಲ ರಾಜ್ಯ ಬಿಜೆಪಿ ನಾಯಕರಲ್ಲು ಸಹ ಚಿತ್ತಾಪುರಕ್ಕೆ ಮುಂದಿನ ನಾಯಕರು ಯಾರು..? ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ. ಚಿತ್ತಾಪುರದಲ್ಲಿ ಕಮಲ ಅರಳಿಸಲು ಕಾರಣೀಭೂತರಾದ ವಾಲ್ಮೀಕ ಅವರು ಇಲ್ಲ ಎಂಬುದು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.
ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದಲ್ಲಿ ಏಕೈಕ ಕಮಲ ನಾಯಕರಾಗಿ ಗುರುತಿಸಿಕೊಂಡಿದ್ದ ದಿ.ವಾಲ್ಮೀಕ ನಾಯಕ, ಕಾಂಗ್ರೆಸ್‍ನ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳಿಂದ ಪರಭಾವಗೊಂಡಿದ್ದರು.
ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ನಡೆದ ಉಪಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತಮಗೆ ಸಿಕ್ಕ ಅಲ್ಪ ಅವಧಿಯಲ್ಲಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದ ವಾಲ್ಮೀಕ ನಾಯಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅದೇ ಪ್ರಿಯಾಂಕ ಖರ್ಗೆ ವಿರುದ್ದ ಸ್ಪರ್ಧಿಸಿ ಸೋಲುಂಡಿದ್ದರು.