ಕರ್ನಾಟಕ

karnataka

ETV Bharat / state

ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ.. ಶಾಸಕರ ಬೆಂಬಲಿಗನಿಗೆ ಒಲಿದ ಮೇಯರ್​ ಗಾದಿ - kalaburagi municipal corporation election

12 ವರ್ಷಗಳ ನಂತರ ಮತ್ತೆ ಸ್ವಂತ ಶಕ್ತಿಯ ಮೇಲೆ ಬಿಜೆಪಿಯು ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.

Kalaburgi Municipal Corporation
ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

By

Published : Mar 23, 2023, 3:20 PM IST

Updated : Mar 23, 2023, 11:00 PM IST

ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬೆಂಬಲಿಗ ವಿಶಾಲ ದರ್ಗಿ ಪಾಲಿಕೆ ನೂತನ ಮೇಯರ್ ಆಗಿ, ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಲ್ಲಿ ಸಫಲವಾಗಿದೆ.

2010 ರಲ್ಲಿ ದಿವಂಗತ ಚಂದ್ರಶೇಖರ ಪಾಟೀಲ್ ರೇವೂರ ಶಾಸಕರಿದ್ದಾಗ ಬಿಜೆಪಿ ಮಹಾನಗರ ಪಾಲಿಕೆ ಚುಕ್ಕಾಣೆ ಹಿಡಿದಿತ್ತು. ಇದೀಗ 12 ವರ್ಷಗಳ ನಂತರ ಎರಡನೇ ಬಾರಿಗೆ ಚಂದ್ರಶೇಖರ ಪಾಟೀಲ್ ಪುತ್ರರಾಗಿರುವ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಪ್ರಯತ್ನದಿಂದ ಸ್ವತಂತ್ರವಾಗಿ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಭಾವುಟ ಹಾರಿಸಿದೆ.

ಇಂದು ಟೌನ್‌ಹಾಲ್‌ನಲ್ಲಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ನಡೆಯಿತು. ಒಟ್ಟು 65 ಜನ ಸದಸ್ಯರು ಮತದಾನಕ್ಕೆ ಹಾಜರಾಗಿದ್ದರು. ಇದರಲ್ಲಿ ಬಿಜೆಪಿ 33 ಮತ ಪಡೆದು ಗೆದ್ದು ಬಿಗಿದರೆ, ಜೆಡಿಎಸ್ ಬೆಂಬಲ ಪಡೆದರೂ ಕಾಂಗ್ರೆಸ್ 32 ಮತ ಪಡೆದು ಸೋಲು ಒಪ್ಪಿಕೊಂಡಿದೆ. ಮಹಾನಗರ ಪಾಲಿಕೆ 55 ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 70 ಜನ ಮತದಾನ ಹಕ್ಕು ಹೊಂದಿದ್ದಾರೆ. ಆದರೆ, ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರನ್ನು ನ್ಯಾಯಾಲಯ ಅನರ್ಹಗೊಳಿಸಿದೆ. ಬಾಬುರಾವ ಚಿಂಚನಸೂರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ 68 ಜನರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಪಾಲಿಕೆ ಗಾದಿ ಹತ್ತಲು 35 ಸದಸ್ಯ ಬಲ ಬೇಕಿತ್ತು.

ಕಾಂಗ್ರೆಸ್ 27 ಪಾಲಿಕೆ ಸದಸ್ಯರು, 1 ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರು, 1 ಖನೀಜ್ ಫಾತೀಮಾ ಶಾಸಕಿ ಮತ್ತು 1 ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಚುನಾಯಿತ ಪರಿಷತ್ ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಒಟ್ಟು 30 ಸದಸ್ಯ ಬಲ ಹೊಂದಿತ್ತು. ಇತ್ತ ಬಿಜೆಪಿ 22 ಪಾಲಿಕೆ ಸದಸ್ಯರು ಮತ್ತು ಸಂಸದ ಉಮೇಶ್ ಜಾಧವ್, ರಾಜ್ಯಸಭೆ ಸದಸ್ಯ ಲೇಹರ್ ಸಿಂಗ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್, ಗ್ರಾಮೀಣ ಶಾಸಕ‌ ಬಸವರಾಜ್ ಮತ್ತಿಮೂಡ್ ಹಾಗೂ ಎಂಎಲ್​ಸಿ ಸಾಬಣ್ಣ ತಳವಾರ, ಬಿ.ಜಿ.ಪಾಟೀಲ್, ಶಶೀಲ್‌ ಜಿ. ನಮೋಶಿ, ಸುನೀಲ್ ವಲ್ಯಾಪುರೆ, ತುಳಸಿ‌ ಮುನರಾಜು, ರಘುನಾಥ್ ಮಲ್ಕಾಪುರೆ, ಲಕ್ಷ್ಮಣ್ ಸವದಿ ಹಾಗೂ ಭಾರತಿ ಶೆಟ್ಟಿ ಹೀಗೆ ಒಟ್ಟು 34 ಸದಸ್ಯರ ಬಲವನ್ನು ಬಿಜೆಪಿ ಹೊಂದಿತ್ತು. ಎರಡು ಪಕ್ಷಕ್ಕೆ ಬಹುಮತ ಇರಲಿಲ್ಲ, ಜೆಡಿಎಸ್ ನಾಲ್ಕು ಸ್ಥಾನ ಹೊಂದಿದ್ದು‌ ಕಿಂಗ್ ಮೇಕರ್ ಆಗಿತ್ತು. ಎಲ್ಲ ಸದಸ್ಯರು ಮತದಾನಕ್ಕೆ ಆಗಮಿಸಿದ್ರೆ ಎರಡು ಪಕ್ಷದ ಬಲ ಸಮವಾಗುವ ಆಗುವ ಸಾಧ್ಯತೆ ಇತ್ತು.

ಆದ್ರೆ ರಾಜಕೀಯ ರಣತಂತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಲಿಮ್ ಪಟೇಲ್ ಮತ ಚಲಾಯಿಸದೆ ತಟಸ್ಥರಾಗಿ ಉಳಿದಿದ್ದು, ಬಿಜೆಪಿ ಗೆಲವು ಸರಳವಾಗಿದೆ. ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಎಮ್​​ಎಲ್​​ಸಿ ಲಕ್ಷ್ಮಣ ಸವದಿ ಕೂಡಾ ಗೈರಾಗಿದ್ದರು. ಹೀಗಾಗಿ‌ ಮತ ಕೇಂದ್ರದಲ್ಲಿ ಉಪಸ್ಥಿತರಿದ್ದ 65 ಜನ ಮತದಾರರಲ್ಲಿ ಬಿಜೆಪಿ 33 ಮತ ಪಡೆದು ಮೇಯರ್ ಉಪ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಲಬುರಗಿ ಮಾಹಾನಗರ ಪಾಲಿಕೆ ಚುನಾವಣ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಆದ್ರೆ ಬಿಜೆಪಿ ಕೆಲ ಹೊರಗಿನ ಎಂಎಲ್‌ಸಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದರಿಂದ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ ಹೊಸ ಮತದಾರರ ಮತ ಕೂಡಾ ಪರಿಗಣಿಸುವಂತೆ ತೀರ್ಪು ನೀಡಿತ್ತು. ಹೀಗಾಗಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಒಂದು ಮತದಿಂದ ಬಿಜೆಪಿ ಜಯಭೇರಿಯಾಗಿದೆ.

ಎಲ್ಲ ಸದಸ್ಯರನ್ನು ಸೇರಿಸಿಕೊಂಡು ನಗರದ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ಹೊಸದಾಗಿ ಆಯ್ಕೆಯಾದ ವಿಶಾಲ‌ ದರ್ಗಿ ಭರವಸೆ ನೀಡಿದ್ದಾರೆ. ಇತ್ತ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕಾಂಗ್ರೆಸ್​​ನವರು ಅನಗತ್ಯವಾಗಿ ಕೋರ್ಟ್ ಮೆಟ್ಟಿಲೇರಿ‌ ಒಂದೂವರೆ ವರ್ಷ ಅಭಿವೃದ್ಧಿ ಆಗದಂತೆ ಮಾಡಿದ್ದಾರೆ. ಇನ್ಮುಂದೆ ತ್ವರಿತಗತಿಯಲ್ಲಿ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ಹೇಳಿದರು.

ಇದನ್ನೂ ಓದಿ:ಶಿಕಾರಿಪುರ ಕ್ಷೇತ್ರ ಪರ್ಯಟನೆ: ಯಡಿಯೂರಪ್ಪ ಬಳಿಕ "ಶಿಕಾರಿ" ಮಾಡ್ತಾರಾ ಪುತ್ರ ವಿಜಯೇಂದ್ರ?

Last Updated : Mar 23, 2023, 11:00 PM IST

ABOUT THE AUTHOR

...view details