ಕಲಬುರಗಿ:ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ ಸೇರಿವೆ.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ ನೂತನ ಅಧ್ಯಕ್ಷರಾಗಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಉಪಾಧ್ಯಕ್ಷರಾಗಿ ಶಿವರಾಜ ಸಜ್ಜನ್ ಆಯ್ಕೆಯಾಗಿದ್ದಾರೆ. ಒಟ್ಟು 16 ಸದಸ್ಯರ ಬಲ ಹೊಂದಿದ್ದ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾವಣೆಗೂ ಮುನ್ನವೇ ಕಾಂಗ್ರೆಸ್ನ ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಂಡಿತ್ತು. ಇದರಿಂದಾಗಿ ಅಧಿಕಾರದ ಗದ್ದುಗೆ ಏರಲು ಬಿಜೆಪಿಗೆ ದಾರಿ ಸುಗಮವಾಗಿತ್ತು.
ಕಾಂಗ್ರೆಸ್ನಿಂದ ಬಸವರಾಜ ಅಣ್ಣಾರಾವ್ ಪಾಟೀಲ ಅಧ್ಯಕ್ಷ ಸ್ಥಾನಕ್ಕೆ, ಸಿದ್ಧರಾಮರೆಡ್ಡಿ ಪಾಟೀಲ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಗಳು 9 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಗಳು 4 ಮತ ಪಡೆದು ಐದು ಮತಗಳ ಅಂತರದಿಂದ ಸೋತಿದ್ದಾರೆ.
ಓದಿ:ಸತತ 4 ಗಂಟೆ ಸಿಸಿಬಿ ಡ್ರಿಲ್, ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದ ನಟಿ ರಾಧಿಕಾ
ಈ ವೇಳೆ ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆದರೆ, ವಾಮಮಾರ್ಗನೂ ಅನುಸರಿಸಿಲ್ಲ, ಅಪರೇಷನ್ ಕಮಲನೂ ಮಾಡಿಲ್ಲ ಎಂದು ನೂತನ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರಿಂದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.