ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆ ಕಾವೇರುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ವೇಗದ ಪ್ರಚಾರ ನಡೆಸುತ್ತಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 55 ವಾರ್ಡ್‌ಗಳ ಪೈಕಿ 47 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ತಮ್ಮ ಅಭ್ಯರ್ಥಿಗಳ ಪರ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ವಾರ್ಡ್ ನಂಬರ್ 6 ರಲ್ಲಿ ನಿನ್ನೆ ಭರ್ಜರಿ ಪ್ರಚಾರ ಮಾಡಿದರು. ನಂತರ ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಈ ವೇಳೆ ಮಾತನಾಡಿದ ನಿರಾಣಿ, ಕೆಲವು ಕಾರಣಗಳಿಂದ 55 ವಾರ್ಡ್‌ಗಳ ಪೈಕಿ 47 ವಾರ್ಡ್‌ಗಳಲ್ಲಿ ಮಾತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 35ಕ್ಕೂ ಅಧಿಕ ಅಭ್ಯರ್ಥಿಗಳು ಈ ಬಾರಿ ಜಯಭೇರಿ ಬಾರಿಸಲಿದ್ದಾರೆ. ಈ ಬಾರಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ವಾರ್ಡ್ ನಂಬರ್ 39ರ ವಿದ್ಯಾನಗರ ಮತ್ತು ಕಾಂತಾ ಕಾಲೋನಿಯಲ್ಲಿ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಕ್ಯಾಂಪೇನ್ ಮಾಡಿದರು. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಹಾಗೂ ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು, ಈ ಬಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ಪಾಲಾಗಲಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದ್ದು, ಯುಪಿಎ ಅವಧಿಯಲ್ಲಿ ಕಲಬುರಗಿಗೆ ಜಾರಿಯಾಗಿದ್ದ ಅನೇಕ ಯೋಜನೆಗಳು ವಾಪಸ್ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ, ಪಾಲಿಕೆ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು, ಈ ಭಾಗಕ್ಕೆ ಬಿಜೆಪಿಯಿಂದ ಆದ ಅನ್ಯಾಯಕ್ಕೆ ಜನ ತೀರ್ಪು ಕೊಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.