ಕಲಬುರಗಿ:ನಗರದಲ್ಲಿ ನಡೆದಿದ್ದ ಯುವಕನ ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಟೋ ಫೈನಾನ್ಸ್ ವಿಚಾರವಾಗಿ ಕೇವಲ 15 ಸಾವಿರ ರೂ.ಗಳಿಗೆ ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಕಲಬುರಗಿ ನಗರದ ದುಬೈ ಕಾಲೋನಿ ನಿವಾಸಿ ವೀರೇಶ್, ಸೂಪರ್ ಮಾರ್ಕೆಟ್ ಪ್ರದೇಶದ ಪಾತ್ರೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ಕಿಡ್ನಾಪ್ ಮಾಡಿ ಕೊಲೆಗೈಯ್ಯಲಾಗಿತ್ತು.
ಕೊಲೆಗೆ ಕಾರಣವಾಯ್ತು ಫೈನಾನ್ಸ್:
ವೀರೇಶ್ ತನ್ನ ಆಪ್ತ ಸ್ನೇಹಿತ ಸಾಗರ್ ಎನ್ನುವವನಿಗೆ ಆಟೋ ಪಡೆಯಲು ಫೈನಾನ್ಸ್ ಕೊಡಿಸಿದ್ದನು. ಫೈನಾನ್ಸ್ಗೆ ಶ್ರೀಶೈಲ್ ಎಂಬುವವನಿಂದ ಶ್ಯೂರಿಟಿ ಕೊಡಿಸಿದ್ದನು. ಆದರೆ ಫೈನಾನ್ಸ್ ಪಡೆದಿದ್ದ ಆಟೋ ಚಾಲಕ ಸಾಗರ್ ಕೆಲದಿನಗಳ ನಂತರ ತಲೆಮರೆಸಿಕೊಂಡಿದ್ದ. ಹೀಗಾಗಿ ಫೈನಾನ್ಸ್ನವರು ಶ್ರೀಶೈಲ್ ಮನೆಗೆ ತೆರಳಿ ಶ್ಯೂರಿಟಿ ನೀಡಿದ್ದೀರಾ, ನೀವೇ ಹಣ ಪಾವತಿಸಿ ಎಂದು ಬೆನ್ನು ಬಿದ್ದಿದ್ದರು.
ಇದರಿಂದ ಬೇಸತ್ತ ಶ್ರೀಶೈಲ್ ಕೂಡ ತಲೆಮರೆಸಿಕೊಂಡಿದ್ದ. ಈ ಬಗ್ಗೆ ವೀರೇಶ್, ಶ್ರೀಶೈಲ್ ತಲೆಮರೆಸಿಕೊಂಡಿದ್ದ ಸ್ಥಳವನ್ನು ಫೈನಾನ್ಸ್ನವರಿಗೆ ತೋರಿಸಿದ್ದ. ಇದರಿಂದ ಕೋಪಗೊಂಡ ಶ್ರೀಶೈಲ್, ಫೈನಾನ್ಸ್ ಕೊಡಿಸಿದ್ದು ನೀನು, ನೀನೆ ಹಣ ಪಾವತಿಸು ಎಂದು ವೀರೇಶ್ಗೆ ಧಮ್ಕಿ ಹಾಕಿದ್ದು, ಇಬ್ಬರ ನಡುವೆ ಜಗಳವಾಗಿತ್ತು.
ಓದಿ: ಮಧ್ಯವರ್ತಿಯಾಗಿ ಹಣ ಕೊಡಿಸಿದ ತಪ್ಪಿಗೆ ತಾನೇ ಬಲಿಯಾದ ಯುವಕ
ಬಳಿಕ ಕುಪಿತ ಶ್ರೀಶೈಲ್, ತನ್ನ ಸಹಚರರೊಂದಿಗೆ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೀರೇಶ್ನನ್ನು ಎಳೆದೊಯ್ದು ಕಲಬುರಗಿ ತಾಲೂಕಿನ ಸಿಂದಗಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಅಲ್ಲೇ ಹೂತು ಹಾಕಲು ಯತ್ನಿಸಿದ್ದರು. ಆರೋಪಿಗಳು ವೀರೇಶ್ನನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆ ಕೈಗೊಂಡ ಕಲಬುರಗಿ ಗ್ರಾಮೀಣ ಪೊಲೀಸರು, ಕೇವಲ ಎರಡು ದಿನಗಳಲ್ಲೇ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾಸಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಹಣಕಾಸಿನ ವಿಚಾರದಲ್ಲಿ ವಿರೇಶ್ನನ್ನು ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಮೇಲೆ ಕಲ್ಲು ಹಾಕಿ ಕಲಬುರಗಿ ಯುವಕನ ಹತ್ಯೆ
ಒಟ್ಟಾರೆ ಸ್ನೇಹಿತನಿಗೆ ಸಹಾಯ ಮಾಡಿದ್ದ ವೀರೇಶ್ ಬಾರದ ಲೋಕಕ್ಕೆ ತೆರಳಿದ್ದಾನೆ. ಕೇವಲ 15 ಸಾವಿರ ರೂ.ಗೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.