ಕಲಬುರಗಿ: ಬಾಳೆ ಬೆಳೆದರೆ ಬಾಳು ಬಂಗಾರವಾಗುತ್ತದೆ ಎಂದುಕೊಂಡು ಬೆಳೆ ಬೆಳೆದ ರೈತನೊಬ್ಬ ಇದೀಗ ಕಣ್ಣೀರು ಹಾಕುತ್ತಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ರೈತ ಚಂದ್ರಯ್ಯ ಎಂಬುವರು 6 ಎಕರೆ ಜಾಗದಲ್ಲಿ ಬಾಳೆ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಅಂದಾಜು ಮೂರು ಲಕ್ಷ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದು, ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ.
ಕೆಲವರು ತೋಟಕ್ಕೆ ಬಂದು ಖರೀದಿಸಲು ಮುಂದಾದರೂ ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಡಜನ್ಗೆ ಕೇವಲ ಮೂರು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇನೆ. ಏಜಂಟ್ರಿಗೆ ಹೇಳಿದರೂ ಖರೀದಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಬಹುತೇಕರಿಗೆ ಜ್ವರ, ನೆಗಡಿ, ಗಂಟಲು ನೋವು ಕಂಡು ಬಂದಿರುವುದರಿಂದ ಯಾರೂ ಬಾಳೆ ಕೇಳದಂತಾಗಿದೆ. ಬಹುತೇಕ ಬೆಳೆ ತೋಟದಲ್ಲೇ ಕೊಳೆಯುತ್ತಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.