ಕಲಬುರಗಿ: ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ , ಸದಸ್ಯರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿದ್ದಾರೆ ಎನ್ನಲಾದ ವಿಚಿತ್ರ ಘಟನೆ ನಡೆದಿದೆ.
ಶಹಾಬಾದ ಸಮೀಪದ ಮಾಲಗತ್ತಿ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಇಂತಹದೊಂದು ಬ್ಲ್ಯಾಕ್ ಮಾಜಿಕ್ ಮಾಡಲಾಗಿದೆ. ಕಚೇರಿ ಪ್ರವೇಶಿಸುವ ಮುಖ್ಯದ್ವಾರದ ಬಲಭಾಗದ ಮೂಲೆಯಲ್ಲಿರುವ ಕಪಾಟಿನ ಅಡಿ ವಾಮಾಚಾರ ಮಾಡಿದ ಎರಡು ಚೀಟಿಗಳು ಪತ್ತೆಯಾಗಿವೆ. ಚೀಟಿಗಳಲ್ಲಿ ಕುಂಬಳಕಾಯಿ ಚಿತ್ರ, ಮನುಷ್ಯನ ಮುಖದ ಆಕಾರದ ಚಿತ್ರ, ತಕ್ಕಡಿ ಆಕಾರದ ಮಧ್ಯದಲ್ಲಿ ಸ್ವಸ್ತಿಕ್ ಚಿತ್ರ, ದೇವರ ನಾಮಸ್ಮರಣ, ಆದಿಶಕ್ತಿ, ಆದೀಶ್ವರ ನಾಮಸ್ಮರಣ, ಹಲವು ಅಂಕಿ - ಸಂಖ್ಯೆಗಳು, ಅನೇಕರ ಹೆಸರುಗಳು ಇವೆ. ಒಂದರಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿ 24 ಹೆಸರುಗಳಿದ್ದು, ಇನ್ನೊಂದರಲ್ಲಿ ಗ್ರಾಮ ಪಂಚಾಯಿತಿ 11 ಜನಪ್ರತಿನಿಧಿಗಳ ಹೆಸರಿದೆ. ಚೀಟಿಗೆ ಅರಿಶಿಣ - ಕುಂಕುಮ, ಗುಲಾಲ್ ಹಚ್ಚಿ ಪೂಜೆ ಮಾಡಲಾಗಿದೆ.