ಕಲಬುರಗಿ :ಕೊರೊನಾ ವೈರಸ್ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಹಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಅದರಂತೆ ಕೊರೊನಾದಿಂದಾಗಿ ಮಂಗಳಮುಖಿಯರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಮಂಗಳಮುಖಿಯರು ಮಾತ್ರ ಕೊರೊನಾಗೆ ಸೆಡ್ಡು ಹೊಡೆದು ಕೃಷಿ ಮತ್ತು ಹೈನುಗಾರಿಕೆ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಕೊರೊನಾ ಬದುಕಿನ ದೃಷ್ಠಿಕೋನ ಬದಲಿಸಿತು.. ಭಿಕ್ಷಾಟನೆ ಬಿಟ್ಟು ಕೃಷಿಯತ್ತ ಮಂಗಳಮುಖಿಯರು!! - auspicious people engaged in farming
ಕೊರೊನಾ ಕಲಿಸಿದ ಪಾಠದಿಂದ ನಾವು ಸ್ವಯಂ ಕೃಷಿಕರಾಗಿ, ಹೈನುಗಾರಿಕೆ ಕೂಡ ನಮ್ಮ ವೃತ್ತಿಯನ್ನಾಗಿಸಿಕೊಂಡು ಬದುಕಿನ ಬಂಡಿ ನೂಕುತ್ತಿದ್ದೇವೆ..

ಜಿಲ್ಲೆಯ ಆಳಂದ ಹಾಗೂ ಚಿತ್ತಾಪುರ ತಾಲೂಕಿನ ಮಂಗಳಮುಖಿಯರು ಲಾಕ್‍ಡೌನ್ ಬಳಿಕ ಭಿಕ್ಷಾಟನೆ ಬಿಟ್ಟು ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಪ್ರಾರಂಭಿಸಿದ್ದಾರೆ. ಕೆಲವರು ತಮ್ಮ ಸ್ವಂತ ಜಮೀನಿನಲ್ಲಿ ಉಳುಮೆ ಮಾಡಿದ್ರೆ, ಕೆಲವರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇನ್ನು, ಕೆಲವರು ಜಮೀನು ಲೀಸ್ ಪಡೆದು ಹೊಲದಲ್ಲಿ ದುಡಿಯುತ್ತಿದ್ದಾರೆ. ಮತ್ತೆ ಕೆಲವು ಮಂಗಳಮುಖಿಯರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.
ಮಂಗಳಮುಖಿಯರೆಂದರೆ ಕೇವಲ ಭಿಕ್ಷಾಟನೆ ಮಾಡುವ ಮತ್ತು ಲೈಂಗಿಕ ಕಾರ್ಯಕರ್ತೆಯರೆಂಬ ಕೀಳು ಮನೋಭಾವ ಸಮಾಜದಲ್ಲಿದೆ. ನಾವು ಕೂಡ ಇತರರಂತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂಬ ಛಲದಿಂದ ದುಡಿದು ಸಮಾಜದಲ್ಲಿ ಗೌರವಯುತ ಬದುಕನ್ನು ಕಟ್ಟಿಕೊಂಡಿದ್ದೇವೆ. ಕೊರೊನಾ ಕಲಿಸಿದ ಪಾಠದಿಂದ ನಾವು ಸ್ವಯಂ ಕೃಷಿಕರಾಗಿ, ಹೈನುಗಾರಿಕೆ ಕೂಡ ನಮ್ಮ ವೃತ್ತಿಯನ್ನಾಗಿಸಿಕೊಂಡು ಬದುಕಿನ ಬಂಡಿ ನೂಕುತ್ತಿದ್ದೇವೆ ಎನ್ನುತ್ತಾರೆ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಮಂಗಳಮುಖಿ ಶಾಂತಪ್ಪ ಪರೀಟ್.