ಸೇಡಂ (ಕಲಬುರಗಿ): ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಎಐಯುಟಿಯುಸಿ ವತಿಯಿಂದ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
ಕೊರೊನಾ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಆಧಾರ ಸ್ತಂಭಗಳಾಗಿ ನಿಂತಿದ್ದಾರೆ. ಜೀವನದ ಹಂಗು ತೊರೆದು ದೇಶವನ್ನು ರಕ್ಷಿಸಲು ನಿಂತಿದ್ದಾರೆ. ಆದರೆ ಅವಶ್ಯಕತೆಗೆ ತಕ್ಕಂತೆ ಸುರಕ್ಷತಾ ಸಾಮಗ್ರಿಗಳನ್ನು ನೀಡಿಲ್ಲ. ಕೂಡಲೇ ಆಶಾ ಕಾರ್ಯಕರ್ತರ ಮಾಸಿಕ ವೇತನ 12 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ, ತಾಲೂಕು ವೈದ್ಯಾಧಿಕಾರಿ ಡಾ. ಸದಾನಂದರೆಡ್ಡಿ ಶೇರಿ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಎಐಯುಟಿಯುಸಿ ಜಂಟಿ ಕಾರ್ಯದರ್ಶಿ ಭಾಗಣ್ಣ ಬುಕ್ಕ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ರೇಣುಕಾ ಎಡಗಾ, ಕಾರ್ಯದರ್ಶಿ ವೀರಮಣಿ ಕುರಕುಂಟಾ, ಲಕ್ಷ್ಮೀ ಕೋಡ್ಲಾ, ಮಹಾದೇವ ಕೋಲಕುಂದಾ, ಶೀಲಾ ಕುರಕುಂಟಾ, ಮುದ್ದಮ್ಮ ಯಡಗಾ, ಮಂಜುಳಾ ಮಳಖೇಡ, ಶಾಂತಮ್ಮ ಮದನಾ, ಕಮಲಾ ಕೆಆರ್ ಪಲ್ಲಿ, ಕಾಶೀಬಾಯಿ ಇನ್ನಿತರರು ಇದ್ದರು.