ಕಲಬುರಗಿ: ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದ ವ್ಯಕ್ತಿಯನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿ ಸಿಇಎನ್ ಪೊಲೀಸ್ ಠಾಣೆಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾರ್ಫೆಲ್ ನಿವಾಸಿ ಮೊಹಮ್ಮದ್ ಖಾನ್ (37) ಬಂಧಿತ ಆರೋಪಿ. ಬಂಧಿತನಿಂದ ಎರಡು ಲ್ಯಾಪ್‌ಟಾಪ್, ಒಂದು ಹಾರ್ಡ್ ಡಿಸ್ಕ್, ₹2,20,000 ನಗದು ಹಣವನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದ ಏಷ್ಯನ್ ಮಾಲ್ ಮೊದಲನೆ ಮಹಡಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಆರೋಪಿ, ಬಟ್ಟೆ ಅಂಗಡಿಯ ಒಳಗೆ ಒಂದು ಕೋಣೆಯಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದ. ದೇಶದ ವಿವಿಧ ಭಾಗಗಳಲ್ಲಿರುವ ವಿಶ್ವವಿದ್ಯಾಲಯಗಳನ್ನು ಇಂಟರ್‌ನೆಟ್‌ನಲ್ಲಿ ಪರಿಶೀಲಿಸಿ, ಅವುಗಳ ಲೋಗೋ ಕಾಫಿ ಮಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿಟೆಕ್, ಎಂಬಿಎ, ಎಂಸಿಎ, ಎಂಟೆಕ್, ಬ್ಯಾಚುಲರ್ ಡಿಗ್ರಿ ಪದವಿ ಪ್ರಮಾಣ ಪತ್ರಗಳನ್ನು ನೇರವಾಗಿ 30 ರಿಂದ 45 ದಿನಗಳಲ್ಲಿ ನೀಡುತ್ತಿದ್ದ.
ಅಂಕಪಟ್ಟಿ ತಯಾರಿಸಲು ವಿದ್ಯಾರ್ಥಿಗಳಿಂದ ಜೆರಾಕ್ಸ್ ಅಂಕಪಟ್ಟಿ, ಐಡಿ ಪ್ರೂಫ್, ಫೋಟೋ ಪಡೆದುಕೊಂಡು ಬಿಇ, ಬಿಟೆಕ್ ಪದವಿಗೆ 3 ರಿಂದ 3.5 ಲಕ್ಷ, ಎಂಬಿಎಗೆ 1.5 ಲಕ್ಷ, ಎಂಸಿಎಗೆ 90 ಸಾವಿರ, ಡಿಗ್ರಿಗೆ 50 ಸಾವಿರ, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಇತರೆ ಅಂಕಪಟ್ಟಿಗೆ ₹30 ರಿಂದ ₹40 ಸಾವಿರ ಹಣ ಪಡೆಯುತ್ತಿದ್ದ.
ಸೇಂಟ್ ಅಲೋಶಿಯಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಸಾಂಗೈ ಇಂಟರ್ ನ್ಯಾಷನಲ್ ಯೂನಿವರ್ಸಿಟಿ, ಹಿಮಾಲಯ ಯೂನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ತಯಾರಿಸಿ ಕೊಡುತ್ತಿದ್ದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.