ಕಲಬುರಗಿ: ಬಂದೂಕು ತೋರಿಸಿ ದರೋಡೆ ನಡೆಸಿದ ಘಟನೆ ಕಲಬುರಗಿಯ ಏಷ್ಯನ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಘಟನೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಲ್ವರು ಮುಸುಕುಧಾರಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಮನೆಯೊಳಗೆ ನುಗ್ಗಿ ಬಂದೂಕು ತೋರಿಸಿದ ದುಷ್ಕರ್ಮಿಗಳು, 50 ಸಾವಿರ ರೂ. ನಗದು, ಐದು ಲಕ್ಷ ರೂ. ಮೌಲ್ಯದ ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಖಾಲಿಬ್ ತಾಳಿಕೋಟೆ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದೆ. ಖಾಲಿಬ್ ತಾಳಿಕೋಟೆ ಮತ್ತು ಆತನ ಚಾಲಕ ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಈ ವೇಳೆ ಒಳನುಗ್ಗಿದ ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಹಣ ನೀಡುವಂತೆ ಬೆದರಿಸಿದ್ದಾರೆ.
50 ಸಾವಿರ ರೂ. ನಗದು ಪಡೆದು, ಕಾರ್ ಕೀ ಕಿತ್ತುಕೊಂಡು ಕೆಳಗೆ ನಿಲ್ಲಿಸಿದ್ದ ಕಾರನ್ನು ಕದ್ದೊಯ್ದಿದ್ದಾರೆ. ಘಟನೆ ನಡೆದ 24 ಗಂಟೆಗಳೊಳಗಾಗಿ ಪೊಲೀಸರು ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಎಂ.ಎಸ್.ಕೆ. ಮಿಲ್ನ ಆಸೀಫ್ ಸಾಹೇಬ್ ಖಾನ್ ಎಂದು ಗುರುತಿಸಲಾಗಿದೆ. ತನ್ನ ಮೂವರು ಗೆಳೆಯರೊಂದಿಗೆ ಸೇರಿ ಕೃತ್ಯ ಎಸಗಿದ್ದ ಆಸೀಫ್, ಆಟಿಕೆ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಎನ್ನಲಾಗುತ್ತಿದೆ. ಇನ್ನು ಬಂಧಿತನಿಂದ ಒಂದು ಆಟಿಕೆ ಪಿಸ್ತೂಲ್, ಒಂದು ಕಾರು, 18 ಸಾವಿರ ನಗದು, ಒಂದು ಬೈಕ್ ಸೇರಿ 4.30 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.