ಕರ್ನಾಟಕ

karnataka

ETV Bharat / state

ಭೀಮಾ ತೀರದಲ್ಲಿ ದ್ವೇಷಕ್ಕಾಗಿ ಕೊಲೆಗೈದ ಆರೋಪಿಗಳ ಬಂಧನ

ಕಲಬುರಗಿಯ ಭೀಮಾತೀರದಲ್ಲಿ ಬರ್ಬರವಾಗಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ದೇವಲಗಾಣಗಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೈದ ಆರೋಪಿಗಳ ಬಂಧನ
ಕೊಲೆಗೈದ ಆರೋಪಿಗಳ ಬಂಧನ

By ETV Bharat Karnataka Team

Published : Oct 22, 2023, 9:20 AM IST

ಕಲಬುರಗಿ:ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಶಾಸಕ ಎಂವೈ ಪಾಟೀಲ್ ಅವರ ಆಪ್ತ ಮದರಾ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಬಿರಾದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ದೇವಲಗಾಣಗಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಂತೆ ಇದೇ ತಾಲೂಕಿನ ಸಿದನೂರ ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ರೇವೂರ್ (ಬಿ) ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದರಾ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಬಿರಾದಾರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮದರಾ (ಬಿ) ಗ್ರಾಮದ ಗುರುಭೀಮ ಯಂಕಂಚಿ (57), ದತ್ತು ಯಂಕಂಚಿ(32), ನಿಂಗಣ್ಣ ಯಂಕಂಚಿ (44), ಪ್ರಜ್ವಲ ಘತ್ತರಗಿ (19), ಪುಂಡಲಿಂಗ ಯಂಕಂಚಿ (21) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ 2 ಬೊಲೆರೊ ವಾಹನ, 2 ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ.

ಹತ್ಯೆ ಪ್ರಕರಣದ ವಿವರ:ಭೀಮಾ ತೀರದ ಅಫಜಲಪುರ ತಾಲೂಕು ಚೌಡಾಪುರದಲ್ಲಿ ಅಕ್ಟೋಬರ್ 13 ರಂದು ಬೆಳಗ್ಗೆ 11 ಗಂಟೆಗೆ ಕೊಲೆ ನಡೆದಿತ್ತು. ಮದರಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೌಡಪ್ಪಗೌಡ ಬಿರಾದಾರ (57) ಚವಡಾಪುರ ಬಸ್ ನಿಲ್ದಾಣ ಎದುರಿನ ಗ್ಯಾರೇಜ್ ಹತ್ತಿರ ಅಂತ್ಯ ಸಂಸ್ಕಾರಕ್ಕೆಂದು ಶವ ಸಾಗಿಸುವ ಉಚಾಯಿಗೆ ವೆಲ್ಡಿಂಗ್ ಮಾಡಿಸಲು ಆಗಮಿಸಿದಾಗ ಘಟನೆ ನಡೆದಿತ್ತು. ಗ್ರಾಮದಲ್ಲಿ ಬಿರಾದಾರ ಮತ್ತು ಯಂಕಂಚಿ ಕುಟುಂಬದ ಮಧ್ಯೆ ಕಳೆದ 30 ವರ್ಷಗಳಿಂದ ಇದ್ದ ಹಳೆಯ ವೈಷಮ್ಯದ ಹಿನ್ನೆಲೆ ಗೌಡಪ್ಪಗೌಡ ಬಿರಾದಾರ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ದೇವಲ ಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಶಿರಚ್ಛೇದ ಮಾಡಿದ ಆರೋಪಿಗಳು ಅಂದರ್:ಇದೇ ಭೀಮಾ ತೀರದಲ್ಲಿ ನಡೆದ ಮತ್ತೊಂದು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ರೇವೂರ (ಬಿ) ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮತ್ತೊರ್ವ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ.

ಅಫಜಲಪುರ ತಾಲೂಕಿನ ಸಿಧನೂರ್ ಗ್ರಾಮದಲ್ಲಿ ಗ್ರಾಮದ ಬಲಭೀಮ ಸಗರ (23) ಎಂಬ ಯುವಕನನ್ನು ಶುಕ್ರವಾರ ರಾತ್ರಿ ಕೊಡಲಿ ಕುರುಪಿಯಿಂದ ಶಿರಚ್ಛೇದನ ಮಾಡಿ ಕೊಲೆಗೈಯಲಾಗಿತ್ತು. ಕಲಬುರಗಿಯಲ್ಲಿ ಮಾವನ ಮನೆಯಲ್ಲಿ ವಾಸವಿದ್ದ ಬಲಭೀಮ, ದಸರಾ ಹಬ್ಬದ ನಿಮಿತ್ತ ಕಳೆದ ಎರಡು ದಿನಗಳ ಹಿಂದೆ ಮನೆ ಸ್ವಚ್ಛ ಮಾಡಲು ಊರಿಗೆ ಬಂದಿದ್ದ. ಕೊಲೆ ರಿವೇಂಜ್ ತೀರಿಸಿಕೊಳ್ಳಲು ಗ್ರಾಮದ ಮೂವರು ಶುಕ್ರವಾರ ರಾತ್ರಿ ಬಲಭೀಮನ ರುಂಡ ಕಟ್ ಮಾಡಿ ಭೀಕರವಾಗಿ ಹತ್ಯೆಗೈದಿದ್ದರು.

ಕೊಲೆಯಾದ ಯುವಕ ಬಲಭೀಮ ಕಳೆದ ಒಂದು ವರ್ಷದ ಹಿಂದೆ ತನ್ನದೇ ಊರಿನ, ತನ್ನದೆ ಸ್ನೇಹಿತನಾಗಿದ್ದ, ಸಾರಿಗೆ ಬಸ್ ಚಾಲಕನಾಗಿದ್ದ ಶಿವಶರಣ ಹೇರೂರ್ ಎಂಬಾತನೊಂದಿಗೆ ಜಮೀನು ವಿಚಾರವಾಗಿ ಜಗಳ ಮಾಡಿ, ಆತನನ್ನು ಎಣ್ಣೆ ಹೊಡೆಯಲು ಊರಿನ ಹೊರಗಡೆ ಕಾಲುವೆ ಬಳಿ ಕರೆದೊಯ್ದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.

ಕೊಲೆ ಕೇಸ್​ನಲ್ಲಿ ಬಲಭೀಮ ಸಗರ ಜೈಲಿಗೆ ಹೋಗಿದ್ದ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಕಲಬುರಗಿಯ ತನ್ನ ಸೋದರಮಾವನ ಮನೆಯಲ್ಲಿಯೇ ವಾಸವಿದ್ದ. ದಸರಾ ಹಬ್ಬದ ಹಿನ್ನಲೆಯಲ್ಲಿ ಸಿಧನೂರಿಗೆ ಹೋಗಿ ಬರೋದಾಗಿ ಹೋಗಿದ್ದ ಬಲಭೀಮ ಸಗರನನ್ನು ಹಳೆವೈಷಮ್ಯ ಹಿನ್ನೆಲೆ ಶಿವಶರಣ ಹೇರೂರ್ ಸಹೋದರರು ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ

ABOUT THE AUTHOR

...view details