ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಸುದೀರ್ಘ ನಾಲ್ಕು ಗಂಟೆಗಳ ಕಾಲ ಡಿವೈಎಸ್ಪಿಯೊಬ್ಬರನ್ನು ಸಿಐಡಿ ತಂಡ ವಿಚಾರಣೆ ನಡೆಸಿದ್ದು, ಮಹತ್ವದ ಅಂಶಗಳನ್ನು ಕಲೆ ಹಾಕಿರುವ ಸಾಧ್ಯತೆ ಇದೆ.
ಸಿಐಡಿ ಎಸ್ಪಿ ರಾಘವೇಂದ್ರ ಸಮ್ಮುಖದಲ್ಲಿ ಡಿವೈಎಸ್ಪಿಯೊಬ್ಬರನ್ನು ನಿನ್ನೆ ಸಾಯಂಕಾಲ 7 ಗಂಟೆಯಿಂದ 11 ಗಂಟೆವರೆಗೆ ವಿಚಾರಣೆ ಮಾಡಲಾಯಿತು. ಈ ಪೊಲೀಸ್ ಅಧಿಕಾರಿ ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್‌ಪಿನ್ ಆಗಿರುವ ಆರ್.ಡಿ.ಪಾಟೀಲ್ ಆಪ್ತರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇವರ ಪಾತ್ರ ಏನು? ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಮೂಲಗಳ ಪ್ರಕಾರ, ಕೆಲವು ಪಿಎಸ್‌ಐ ಅಭ್ಯರ್ಥಿಗಳನ್ನು ಆರ್.ಡಿ.ಪಾಟೀಲ್‌ಗೆ ಪರಿಚಯಿಸಿ ಡೀಲ್ ಕುದುರಿಸಿದ್ದರು ಎನ್ನಲಾಗುತ್ತಿದೆ. ಈ ನಡುವೆ ಬುಧವಾರ ದಿನವಿಡೀ ಕಿಂಗ್‌ಪಿನ್‌ಗಳಾಗಿರುವ ಆರ್.ಡಿ.ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಸೇರಿದಂತೆ ಇತರರನ್ನು ವಿಚಾರಣೆ ನಡೆಸಿ ಹಲವು ಮಾಹಿತಿ ಕಲೆ ಹಾಕಿಕೊಂಡಿದ್ದಾರೆ.
ಅಲ್ಲದೇ, ಮಂಗಳವಾರದಂದು ಬಂಧಿತರಾಗಿರುವ ಆರ್.ಡಿ.ಪಾಟೀಲ್ ಆಪ್ತರಾಗಿರುವ ಆಡಿಟರ್ ಚಂದ್ರಕಾಂತ ಕುಲಕರ್ಣಿ, ಪಿಎಸ್‌ಐ ಆಗಿ ನೇಮಕಗೊಂಡಿದ್ದ ಪ್ರಭು ಹಾಗೂ ಆತನ ತಂದೆ ಶರಣಪ್ಪ ರಾಜಾಪುರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಐಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಈ ವೇಳೆ ಬಂಧಿತರನಾಗಿರುವ ಅಭ್ಯರ್ಥಿ ಪ್ರಭು, ಸಿಐಡಿ ಮುಂದೆ ಬ್ಲೂಟೂತ್ ಸಹಾಯದಿಂದ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದನ್ನು ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ನಾಲ್ವರು ಟ್ರೈನಿ ಪಿಎಸ್‌ಐಗಳ ವಿಚಾರಣೆ:ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಟ್ರೈನಿ ಪಿಎಸ್‌ಐ ಯಶವಂತಗೌಡ ಎಂಬುವರನ್ನು ಮಂಗಳವಾರ ರಾತ್ರಿ ವಶಕ್ಕೆ ತೆಗೆದುಕೊಂಡು ಸಿಐಡಿ ತಂಡ ಬೆಂಗಳೂರಿಗೆ ಕರೆದುಕೊಂಡು ಹೋದ ಬೆನ್ನಲ್ಲೇ ಪಿಟಿಸಿಯಲ್ಲಿರುವ ಇನ್ನೂ ನಾಲ್ವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮತ್ತೋರ್ವ ಕಾನ್ಸ್ಟೇಬಲ್ ಬಂಧನ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಸಂಬಂಧ ಮತ್ತೊಬ್ಬ ಕಾನ್ಸ್ಟೇಬಲ್ನನ್ನು ಸಿಐಡಿ ಬಂಧಿಸಿದೆ. ಈವರೆಗೆ ಒಟ್ಟು 13 ಮಂದಿ ಆರೋಪಿಗಳನ್ನು ಸೆರೆಹಿಡಿದಂತಾಗಿದ್ದು, ಈ ಪೈಕಿ ಮೂವರು ಪೊಲೀಸರು ಮೋಸದ ಜಾಲದಲ್ಲಿ ಸಿಲುಕಿಕೊಂಡಂತಾಗಿದೆ. ಅಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನ 7 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಯಶವಂತ್ ದೀಪ್ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಹಲವು ವರ್ಷಗಳಿಂದ ಮಾಜಿ ಪ್ರಧಾನಿಗಳ ಭದ್ರತೆಗೆ ಯಶವಂತ್ ನಿಯೋಜನೆಗೊಂಡಿದ್ದ. ಸೇವಾನಿರತ ಕೋಟಾದಡಿ 3ನೇ ರ್‍ಯಾಂಕ್ ಪಡೆದಿದ್ದ. ಅಕ್ರಮ ಎಸಗಿ ಪಿಎಸ್ಐ ಹುದ್ದೆಗೆ ಸೆಲೆಕ್ಟ್ ಆದ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಸಿಐಡಿ ವಿಚಾರಣೆ ಮಾಡುತ್ತಿದೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ವಿಚಾರ: ಸರ್ಕಾರಕ್ಕೆ ಕೆಎಟಿ ನೋಟಿಸ್, ವಿಚಾರಣೆ ಮುಂದೂಡಿಕೆ