ಕಲಬುರಗಿ:ಗ್ರಾಪಂ ಅಧ್ಯಕ್ಷ ಚುನಾವಣೆ ಹಿನ್ನೆಲೆ ಸಿನಿಮಿಯ ರೀತಿಯಲ್ಲಿ ಗ್ರಾಪಂ ಸದಸ್ಯೆಯೊಬ್ಬರನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಸಿಂದಗಿ ಬಿ ಗ್ರಾಮದಲ್ಲಿ ನಡೆದಿದೆ.
ಏನಿದು ಪ್ರಕರಣ: ಸಾವಳಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಶುಕ್ರವಾರದಂದು ನಡೆಯಲಿದೆ. ಅಧ್ಯಕ್ಷ ಚುನಾವಣೆಗೆ ಗ್ರಾಮದ ರಮೇಶ ಕಣಗೊಂಡ ಎಂಬುವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ 10 ಸದಸ್ಯರ ಬೆಂಬಲವಿದೆ. ಇನ್ನುಳಿದ 10 ಜನ ಸದಸ್ಯರು ತಮ್ಮ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದಾರೆ. ಇವರಲ್ಲಿ ಒಬ್ಬರು ರಮೇಶ ಕಣಗೊಂಡ ಅವರಿಗೆ ಬೆಂಬಲ ಕೊಟ್ಟರೆ ಗೆಲವು ಸರಳವಾಗಲಿದೆ ಎಂದು ಒಂದು ಬಣದ ಸದಸ್ಯರು ಆಲೋಚನೆ ಮಾಡಿದ್ದಾರೆ. ಆದರೆ ಸದಸ್ಯೆ ನಾಗಮ್ಮ ಕೊಂಡೆದ ಅವರ ಬಳಿ ತೆರಳಿದ್ದಾಗ ಈ ಘಟನೆ ಅಪಹರಣ ಪ್ರಕರಣಕ್ಕೆ ತಿರುಗಿದ್ದು, ದೂರು, ಪ್ರತಿ ದೂರು ದಾಖಲಿಸಿದ್ದಾರೆ.
ಒಂದು ಬಣದ ಮೇಲೆ ಕಿಡ್ನ್ಯಾಪ್ ಆರೋಪ: ಗ್ರಾಪಂ ಸದಸ್ಯೆ ನಾಗಮ್ಮ ಮತ್ತು ಆಕೆಯ ಮಗ ಕಿಡ್ನ್ಯಾಪ್ ಆರೋಪ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಆರು ಜನ ಕ್ರೂಸರ್ ವಾಹನದಲ್ಲಿ ಸಿಂದಗಿ ಬಿ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ, ಹೊಲದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ನನ್ನ ಬಳಿ ಬಂದು, ನಾವು ಪೊಲೀಸರು, ನಮ್ಮೊಂದಿಗೆ ನೀವು ಬರಬೇಕು ಅಂತ ಹೇಳಿದ್ದಾರೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ಅವರು ನನ್ನ ಕುತ್ತಿಗೆಗೆ ಚಾಕು ಇಟ್ಟು ಸಿನಿಮಿಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ್ದರು. ಈ ವೇಳೆ ನಾನು ಜೋರಾಗಿ ಕೂಗಾಡಿದೆ. ಆಗ ಅಲ್ಲೇ ಹತ್ತಿರದಲ್ಲಿದ್ದ ನನ್ನ ಮಗ ಮಲ್ಲಿಕಾರ್ಜುನ ಕೊಂಡೆದ ರಕ್ಷಣೆಗೆ ದೌಡಾಯಿಸಿದ್ದರು. ಆಗ ಗಲಾಟೆ ನಡೆಯಿತು. ಗಲಾಟೆ ವೇಳೆ ನನಗೆ ಮತ್ತು ನನ್ನ ಮಗನ ಕೈ ಬೆರಳುಗಳಿಗೆ ಚಾಕು ಪೆಟ್ಟು ಬಿದ್ದಿದೆ ಎಂದು ನಾಗಮ್ಮ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಲಾಟೆ ನಡೆದಿರುವ ವಿಷಯ ತಿಳಿದ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿರುವುದನ್ನು ಅರಿತ ದುಷ್ಕರ್ಮಿಗಳು ನನ್ನನ್ನು ಬಿಟ್ಟು ಓಡಿ ಹೋಗಿದರು. ಆದರೆ ಇವರಲ್ಲಿ ಒಬ್ಬನಾದ ಶಿವರಾಜ ತೊಟದ ಎಂಬ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ ಎಂದು ನಾಗಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗ್ರಾಮಸ್ಥರು ಆತನನ್ನು ಮರಕ್ಕೆ ಕಟ್ಟಿ ಥಳಸಿದ್ದಾರೆ. ಗಾಯಾಳುಗಳಾದ ನಾಗಮ್ಮ ಹಾಗೂ ಮಲ್ಲಿಕಾರ್ಜುನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಗಮ್ಮ ಮತ್ತು ಆಕೆಯ ಮಗ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಈ ಘಟನೆ ಕುರಿತಂತೆ ಸಾವಳಗಿ ಗ್ರಾಪಂ ಸದಸ್ಯ ರಮೇಶ ಕಣಗೊಂಡ ಸೇರಿ ಹತ್ತು ಜನರ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.