ಕಲಬುರಗಿ:ಸತ್ತವರನ್ನ ತಂದು ನಿಲ್ಲಿಸುತ್ತಿರಿ, ಉತ್ಸವಗಳನ್ನ ಮಾಡುತ್ತಿರಿ, ಆದರೆ ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಮನಸ್ಸು ಇಲ್ಲ ಎಂದರೆ ಸರ್ಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಮವಸ್ತ್ರ ಕೊಡಲು ವಿಳಂಬ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಹೀಗೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಹೈಕೋರ್ಟ್ ಛೀಮಾರಿ ಬಳಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಕಳಪೆ ಶೂ ಹಾಗೂ ಸಾಕ್ಸ್ ನೀಡಿ ಖರೀದಿಯಲ್ಲಿ ಕಮೀಷನ್ ಹೊಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
"ಹೈಕೋರ್ಟ್ ಛೀಮಾರಿ ಬಳಿಕ ಎಚ್ಚೆತ್ತ ಸರ್ಕಾರ ತರಾತೂರಿಯಲ್ಲಿ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ ಮಾಡಲು ಸರ್ಕಾರ ಶಾಲೆಗೆ ಸೂಚನೆ ನೀಡಿತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಅಕ್ರಮ ಎಸಗಲು ಮುಂದಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಒಂದು ಜೊತೆ ಶೂ ಖರೀದಿಯಲ್ಲಿ 60 ರಿಂದ 80 ರೂಪಾಯಿ ವರೆಗೆ ಕಮಿಷನ್ ಮಾಡಿರುವ ಬಗ್ಗೆ ಖುದ್ದು ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಬಾಯ್ಬಿಟ್ಟಿದ್ದಾರೆ" ಎಂದು ಸಾಮಾಜಿಕ ಕಾರ್ಯಕರ್ತ ಶರಣ್ ಐ ಟಿ ಆರೋಪಿಸಿದ್ದಾರೆ.
"ಹೆಡ್ ಮಾಸ್ಟರ್ಗಳ ಕಮಿಷನ್ ಬಗ್ಗೆ ತಿಳಿದ ಅಂಗಡಿ ಮಾಲೀಕರು ಲೋ ಕ್ವಾಲಿಟಿ, ಹಳೆ ಸ್ಟಾಕ್ ಶೂಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಶೂ ಹಾಕಿದ ಕೆಲವೇ ದಿನಗಳಲ್ಲಿ ಕಿತ್ತು ಹೋಗುತ್ತಿವೆ. ಇನ್ನು ಶ್ಯೂ ಖರೀದಿಯಲ್ಲಿ ಕಮಿಷನ್ ದಂಧೆ ಹೇಗೆ ನಡೆಯುತ್ತಿರೋ ಬಗ್ಗೆ ಓರ್ವ ಮುಖ್ಯೋಪಾಧ್ಯಾಯ ಹೇಳಿದ್ದಾರೆ" ಎನ್ನುತ್ತಾರೆ ಶರಣ್.
ಇನ್ನು ಶೂ, ಸಾಕ್ಸ್ ಖರೀದಿಗಾಗಿ ಶಿಕ್ಷಣ ಇಲಾಖೆ ಕೆಲವು ಮಾನದಂಡಗಳನ್ನ ವಿಧಿಸಿದೆ. 1-5 ನೇ ತರಗತಿ ವಿದ್ಯಾರ್ಥಿಗಳಿಗೆ 1 ಜೊತೆ ಶೂ ಹಾಗು 2 ಜೊತೆ ಸಾಕ್ಸ್ ಖರೀದಿಗೆ 265 ರೂಪಾಯಿ ನಿಗಧಿ ಮಾಡಿದೆ. 6- 8 ನೇ ವಿದ್ಯಾರ್ಥಿಗಳಿಗೆ 295 ರೂಪಾಯಿ ನಿಗದಿ ಮಾಡಿದೆ. ಅದೇ ರೀತಿ 8-10 ನೇ ತರಗತಿ ಮಕ್ಕಳಿಗೆ 435 ರೂಪಾಯಿ ಎಂದು ಸೂಚನೆಯಲ್ಲಿದೆ. ರಾಜ್ಯದ ಒಟ್ಟು 46.37 ಲಕ್ಷ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಶೂ ಖರೀದಿಗಾಗಿ ಒಟ್ಟು 132 ಕೋಟಿ ರೂಪಾಯಿ ಅನುದಾನ ಸರ್ಕಾರ ಮೀಸಲಿಟ್ಟಿದೆ.