ಕಲಬುರಗಿ: ರೈಲ್ವೆ ಇಲಾಖೆ ಅವೈಜ್ಞಾನಿಕ ಕಾಮಗಾರಿಯಿಂದ ಬೇಸತ್ತು ಸೇತುವೆ ಅಗಲೀಕರಣಕ್ಕೆ ಒತ್ತಾಯಿಸಿ ಅಫಜಲಪುರ ತಾಲೂಕಿನ ನೀಲೂರ್ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಸೇತುವೆ ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ರೈಲ್ವೆ ಇಲಾಖೆ ವಿರುದ್ಧ ಕಿಡಿಕಾರಿದರು. ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ 15 ಅಡಿ ಅಗಲವಾದ ಕೆಳ ಸೇತುವೆ ಇತ್ತು. ಆದರೆ, ರೈಲ್ವೆ ಡಬ್ಲಿಂಗ್ ಕಾಮಗಾರಿ ಹೆಸರಿನಲ್ಲಿ 15 ಅಡಿ ಅಗಲದ ಸೇತುವೆಯನ್ನು 8 ಅಡಿ ಅಗಲ ಮಾಡಲಾಗಿದೆ ಎಂದು ಆರೋಪಿಸಿದರು.
ಇದರಿಂದ ದ್ವಿಚಕ್ರ ವಾಹನ ಮಾತ್ರ ಸಂಚಾರಕ್ಕೆ ಸಾಧ್ಯವಿದೆ. ದೊಡ್ಡ ವಾಹನಗಳು ಊರ ಒಳಗೆ ಬರಲು ಆಗುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆಯಿಂದ ಅವೈಜ್ಞಾನಿಕ ಕಾಮಗಾರಿ ಆರೋಪ ಸೇತುವೆ ಕಿರಿದಾಗಿಸಿದ್ದರಿಂದ ಗ್ರಾಮದೊಳಗೆ ಬಸ್, ಆ್ಯಂಬುಲೆನ್ಸ್ ಬರಲು ಆಗೋದಿಲ್ಲ. ಆ್ಯಂಬುಲೆನ್ಸ್ ಬರದಿದ್ರೆ ರೋಗಿಗಳಿಗೆ ಸಮಸ್ಯೆ ಎದುರಾಗುತ್ತೆ. ಸಾವು ನೋವು ಸಂಭವಿಸುವ ಸಾಧ್ಯತೆ ಕೂಡ ಇದೆ. ಗ್ರಾಮದಿಂದ ಹಲವು ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಶಾಲೆ ಹಾಗೂ ಕಾಲೇಜ್ ಹೋಗುವವರಿದ್ದಾರೆ.
ಗ್ರಾಮಕ್ಕೆ ಬಸ್ ಬಾರದಿದ್ರೆ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈಲ್ವೆ ಇಲಾಖೆ ಕೊಡಲೇ ಎಚ್ಚೆತ್ತು ಬ್ರಿಡ್ಜ್ ಅಗಲೀಕರಿಸಬೇಕು. ಇಲ್ಲಾವಾದ್ರೆ ಓವರ್ ಬ್ರಿಡ್ಜ್ ನಿರ್ಮಿಸಿಕೊಂಡುವಂತೆ ಆಗ್ರಹಿಸಿದರು.
ರೈಲ್ವೆ ಇಲಾಖೆಯ ಅವೈಜ್ಞಾನಿಕ ಸೇತುವೆ ಕಾಮಾಗಾರಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸೇತುವೆ ಅಗಲೀಕರಿಸದಿದ್ರೆ ಗ್ರಾಮದ ಜನರ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಕೊಡಲೇ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.