ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಅಪವಿತ್ರಗೊಂಡ ಶಿವಲಿಂಗ ಸ್ವಚ್ಛತೆ ಹಾಗೂ ಪೂಜೆ ವೇಳೆ ಕೋಮು ಗಲಭೆ ಸೃಷ್ಟಿಸಿ ಕಲ್ಲು ತೂರಾಟ ನಡೆದ ಪ್ರಕರಣದ ರೂವಾರಿ ಪುರಸಭೆಯ ಸದಸ್ಯ ಫೀರ್‍ದೋಸ್ ಖಾನ್ ಅನ್ಸಾರಿಯನ್ನು ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಿ ಆದೇಶ ಹೊರಡಿಸಿದೆ.
ಮೊಹ್ಮದ್ ಫಿರ್ದೋಸ್ ಆರೀಫ್ ಅನ್ಸಾರಿ (42) ವಿರುದ್ಧ ಕಲಂ 03ರ ಅಡಿ ಕರ್ನಾಟಕ ಕಳ್ಳಭಟ್ಟಿ ಸರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ ಅನೈತಿಕ ವ್ಯವಹಾರಗಳ ಅಪರಾಧ, ಕೊಳಚೆ ಪ್ರದೇಶ ಆಕ್ರಮಿಸಿಕೊಳ್ಳುವ ಮತ್ತು ವಿಡಿಯೋ ಅಥವಾ ಆಡಿಯೋ ಫೈರಸಿ ಚಟುವಟಿಕೆಗಳ ತಡೆ ಅಧಿನಿಯಮ 1985ರ ಕಾಯ್ದೆ ಅಡಿ ಬಂಧನದಲ್ಲಿಡಲು ಆದೇಶಿಸಲಾಗಿದೆ.
ಆರೋಪಿಯು ಕಾಲೇಜು ದಿನಗಳಿಂದಲೇ ಗೂಂಡಾ ಪ್ರವೃತಿ ಹೊಂದಿದ್ದ ಎನ್ನಲಾಗಿದೆ. ಕಳೆದ ಮಾರ್ಚ್ 1ರಂದು ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಶಿವಲಿಂಗಪೂಜೆಗೆ ಕೇಂದ್ರ ಸಚಿವ ಭಗವಂತ್ ಖೂಬಾ ಸೇರಿದಂತೆ ಅನೇಕ ಶಾಸಕರು, ಮುಖಂಡರು ಮುಂತಾದವರು ತೆರಳಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಕೇಂದ್ರ ಸಚಿವ ಖೂಬಾ, ಶಾಸಕ ಬಸವರಾಜ್ ಮತ್ತಿಮೂಡ್ ಸೇರಿದಂತೆ ಹಲವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
ಪ್ರಕರಣದಲ್ಲಿ ಫೀರ್‍ದೋಸ್‍ಖಾನ್ ಪಾತ್ರ ಇರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಡಿಪಾರು ಮಾಡಲು ಮುಂದಾಗಿದೆ. ಸದ್ಯ ಫೀರದೋಸ್‍ಖಾನ್ ನಗರದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಮಾದರಿಯಂತೆ ರಾಜ್ಯದಲ್ಲಿ ಕೋಮುಗಲಭೆಯಲ್ಲಿ ಭಾಗಿಯಾಗಿರುವ ಪುಂಡರನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲು ಆದೇಶ ಮಾಡಿದೆ. ಆ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾನೂನು ಕ್ರಮ ಬಿಗಿಗೊಳಿಸಿದೆ.
ಇದನ್ನೂ ಓದಿ:ನದಿಗೆ ಉರುಳಿ ಬಿದ್ದ ಸೇನಾ ವಾಹನ: 7 ಯೋಧರು ಹುತಾತ್ಮ, ಅನೇಕರಿಗೆ ಗಾಯ