ಕಲಬುರಗಿ: ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದೆ. ಮೂರು ಬಾರಿ ಗೆದ್ದರೂ ಮಂತ್ರಿ ಭಾಗ್ಯ ಒಲಿಯದೆ ಇರುವುದರಿಂದ ಅಭಿಮಾನಿ ಬಳಗಕ್ಕೆ ಭಾರಿ ನಿರಾಶೆ ಮೂಡಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ರೂ ಸಚಿವ ಸ್ಥಾನ ಮಾತ್ರ ಕೈಗೆಟುಕುತ್ತಿಲ್ಲ. ಕಲಬುರಗಿ ಜಿಲ್ಲೆಯವರಾದ ಇಬ್ಬರು ವೈದ್ಯರ ಮಧ್ಯೆ ಸಚಿವ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಆಪ್ತರಾಗಿರೋ ಡಾ. ಅಜಯ್ ಸಿಂಗ್ ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ಗೆ ಮಂತ್ರಿಗಿರಿ ಒಲಿದು ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಬ್ಬರು ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಆದ್ರೆ, ಪ್ರಿಯಾಂಕ್ ಖರ್ಗೆ ಮೂರು ಬಾರಿ ಮಂತ್ರಿಯಾದ್ರೆ ಅಜಯ್ ಸಿಂಗ್ಗೆ ಒಂದು ಬಾರಿಯೂ ಸಚಿವ ಸ್ಥಾನ ಒಲಿಯದಿರುವುದು ಕ್ಷೇತ್ರದ ಜನತೆಗೆ ಬಾರಿ ನಿರಾಸೆ ತಂದಿದೆ. ಕಳೆದ ಬಾರಿಯೇ ಮಂತ್ರಿ ಆಗಬಹುದು ಎಂಬ ನೀರಿಕ್ಷೆ ಇತ್ತು, ಕೊನೆಗೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿತ್ತು. ಈ ಬಾರಿ ಖಂಡಿತ ಸಚಿವರಾಗ್ತಾರೆ ಅನ್ನೋ ಬೆಂಬಲಿಗರ ಭಾರೀ ನಿರೀಕ್ಷೆ ಹುಸಿಯಾಗಿದೆ.
ಇದನ್ನೂ ಓದಿ :ಖರ್ಗೆ ತವರಿನಲ್ಲಿ ಕಾಂಗ್ರೆಸ್ ಕಮಾಲ್.. ಕಲಬುರಗಿಯ 9 ರಲ್ಲಿ 7 ಕ್ಷೇತ್ರ ತೆಕ್ಕೆಗೆ ಪಡೆದ ಕೈಪಡೆ