ಕಲಬುರಗಿ:ಕಾಂಗ್ರೆಸ್ ಹಣೆಬರಹ ಬರೆಯಲು ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿ ಪಿ ಯೋಗೇಶ್ವರ್ ಅವರಿಂದ ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿಯ ನಂತರ ಸರ್ಕಾರ ಪತನ ಆಗುತ್ತೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೇಶ್ವರ ಅವರ ಹಣೆ ಬರಹವನ್ನು ಅವರಿಗೆ ಬರೆಯೋಕೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗೇಶ್ವರ್ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರೂ ಅವರು ಸೋತರು. ಹಾಗಾಗಿ ಬೇರೆಯವರ ಹಣೆಬರಹ ಬರೆಯೋಕೆ ಯೋಗೇಶ್ವರಗೆ ಆಗುತ್ತಾ?. ಹೀಗೆ ಮಾತಾಡಿ ಮಾತಾಡಿ ಯೋಗೇಶ್ವರ್ ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದೆ ಎಂದು ಟಾಂಗ್ ಕೊಟ್ಟರು.
ಪ್ರಧಾನಿ ಮೋದಿಯವರನ್ನು ಇಡೀ ರಾಜ್ಯ ಸುತ್ತಾಡಿಸಿದ್ದರು. ಆದರೆ ಬಿಜೆಪಿ 60 ರಿಂದ 65 ಸೀಟ್ ಗೆಲ್ಲುತ್ತೆ ಅಂತಾ ಅವರು ಅಂದುಕೊಂಡಿರಲಿಲ್ಲ. ನಾವು ಜನರ ಆಶೀರ್ವಾದಿಂದ ಗೆದ್ದಿದ್ದೇವೆ ಎಂದರು. ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ಗೆ ಲಾಭ ಆಗುತ್ತೆ. ಹೆಚ್ ಡಿ ದೇವೇಗೌಡರು ಯಾವತ್ತಾದರೂ ಬಿಜೆಪಿ ಬಗ್ಗೆ ಒಲವು ತೋರಿಸಿದ್ರಾ?. ಮಗನ ಬಲವಂತ, ಮಗ ಕೊಡುವ ಹಿಂಸೆಯಿಂದ ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಮುಳುಗಿ ಹೋಗುವ ಪರಿಸ್ಥಿತಿ ಬಂದಿದೆ ಹಾಗಾಗಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡಿದ್ದಾರೆ. ಕುಮಾರಸ್ವಾಮಿಯವರ ನಡವಳಿಕೆಯಿಂದಲ್ಲೇ ಜೆಡಿಎಸ್ 2019ರಲ್ಲಿ ಅಧಿಕಾರ ಕಳೆದುಕೊಂಡಿತು. ಅವರು ಈ ಹಿಂದೆ ಕಾಂಗ್ರೆಸ್ ಜೆಡಿಸ್ಗೆ ನೀಡಿದ ಸಹಕಾರಕ್ಕೆ ಕನಿಷ್ಠ ಕೃತಜ್ಞತೆ ಹೇಳಿಲ್ಲ. ಬಿಜೆಪಿ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಅವರು ಆಶ್ರಯ ಕೊಡುತ್ತಾರೆ ಎಂದು ಜೆಡಿಎಸ್ ನವರು ಹೋಗಿದ್ದಾರೆ ಎಂದು ಸಚಿವ ಚಲುರಾಯಸ್ವಾಮಿ ಹೇಳಿದರು.
ಪ್ರಗತಿ ಪರಿಶೀಲನಾ ಸಭೆ ನಡೆದ ಕೃಷಿ ಸಚಿವರು:ರಾಜ್ಯದಲ್ಲಿ ಅನಾವೃಷ್ಠಿ ಹಿನ್ನೆಲೆಯಲ್ಲಿ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಮುಂದಿನ ವಾರದಲ್ಲಿ ರಾಜ್ಯಕ್ಕೆ ಬರುವ ಕೇಂದ್ರ ಅಧ್ಯಯನ ತಂಡಕ್ಕೆ ಬೆಳೆ ಮತ್ತು ಬರಗಾಲದ ವಾಸ್ತವ ಸ್ಥಿತಿ ಮನದಟ್ಟು ಮಾಡಿಸುವ ಕೆಲಸ ಕೃಷಿ ಅಧಿಕಾರಿಗಳು ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕೃಷಿ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.