ಕಲಬುರಗಿ: ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ಮೇಲೆ ಪುಡಿರೌಡಿಯೊಬ್ಬ ದರ್ಪ ತೋರಿಸಿದ್ದಾನೆ. ತಲೆಯ ಮೇಲೆ ಕಾಲು ಇಟ್ಟು ದೌರ್ಜನ್ಯ ಮೆರೆದಿದ್ದಾನೆ. ಅಟ್ಟಹಾಸ ಪ್ರದರ್ಶಿಸಿದ ಪುಡಿರೌಡಿ ಯಲ್ಲಪ್ಪ ಕಲ್ಲೂರ ಎಂಬಾತನನ್ನು ಹಿಡಿದು ಪೊಲೀಸರು ಕಂಬಿಹಿಂದೆ ತಳ್ಳಿದ್ದಾರೆ.
ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ಸನ್ನಿಧಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ದೇವರ ಆಸ್ಥಾನದಲ್ಲಿ ವಾಸ್ತವ್ಯ ಹೂಡುವ ಪದ್ದತಿ ರೂಢಿಯಲ್ಲಿದೆ. ಅದರಂತೆ ಭಕ್ತರು ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದಾಗ ಸ್ಥಳೀಯ ನಿವಾಸಿ ಯಲ್ಲಪ್ಪ ಕಲ್ಲೂರ್ ಎಂಬಾತ ಬಂದು ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ ತಲೆಯ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದಾನೆ.
ಗಾಣಗಾಪುರದ ಸಂಗಮ ಸ್ಥಳದಲ್ಲಿರುವ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣ ಮಾಡುವ ಭಕ್ತರ ಮೇಲೆ ದುಷ್ಕೃತ್ಯ ತೋರಿಸಿದ್ದಾನೆ. ಯಲ್ಲಪ್ಪ ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡ್ತಿದ್ದಾನೆ ಎನ್ನಲಾಗಿದೆ. ಆದರೂ ಯಲ್ಲಪ್ಪನ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗ್ತಿಲ್ಲ ಎಂದು ಗಾಣಗಾಪುರ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಾಧ್ಯಮದ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪುಡಿರೌಡಿ ಗಾಣಗಾಪುರದ ನಿವಾಸಿ ಯಲ್ಲಪ್ಪ ಕಲ್ಲೂರ್ ನನ್ನು ಅರೆಸ್ಟ್ ಮಾಡಿದ್ದಾರೆ. ಗಾಣಗಾಪುರದ ಸಂಗಮದಲ್ಲಿ ಅಂಗಡಿ ಇಟ್ಟುಕೊಂಡಿರುವ ಯಲ್ಲಪ್ಪ ಕಲ್ಲೂರ್ ಗಾಂಜಾ ನಶೆಯಲ್ಲಿ ದತ್ತನ ಭಕ್ತರ ಮೇಲೆ ಹಲ್ಲೆ ಮಾಡ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಯಲ್ಲಪ್ಪನನ್ನು ಬಂಧಿಸಿ ಕಂಬಿಹಿಂದೆ ತಳ್ಳಲಾಗಿದೆ.